ಗೋಕರ್ಣದಲ್ಲಿ ಮತ್ತೊಮ್ಮೆ ಭುಗಿಲೆದ್ದ ಬೈಕ್ ವಿವಾದ

 ಆಟೋ ರಿಕ್ಷಾ ಸಂಘದವರಿಂದ ದಿಢೀರ್ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಗೋಕರ್ಣ : ಬಾಡಿಗೆ ಬೈಕ್ ಕೊಡುವ ವಿಚಾರ ಮತ್ತೊಮ್ಮೆ ಭುಗಿಲೆದ್ದಿದ್ದು, ಬಾಡಿಗೆ ಬೈಕ್ ಕೊಡುವುದನ್ನು ವಿರೋಧಿಸಿ ಪೊಲೀಸ್ ಠಾಣೆಯ ಮುಂದೆ ಶುಕ್ರವಾರ ತಡರಾತ್ರಿ ಆಟೋ ರಿಕ್ಷಾ ಸಂಘದವರು ದಿಢೀರ್ ಪ್ರತಿಭಟನೆ ನಡೆಸಿದರು.

ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದಂತೆ ಸಾರಿಗೆ ನಿಯಂತ್ರಣ ಅಧಿಕಾರಿಗಳು ಗೋಕರ್ಣಕ್ಕೆ ದಾಳಿ ಮಾಡಿ ಅನಧಿಕೃತವಾಗಿ ಬೈಕ್ ಬಾಡಿಗೆ ಕೊಡುತ್ತಿರುವುದನ್ನು ಬಂದ್ ಮಾಡುವಲ್ಲಿ ಸಫಲರಾಗಿದ್ದರು. ಆದರೆ ಬೆಂಗಳೂರು ಮೂಲದ ಕಂಪೆನಿಯೊಂದು ಟೂರಿಸ್ಟ್ ಬೈಕ್ ಬಾಡಿಗೆ ಕೊಡುವ ಪರವಾನಿಗೆಯೊಂದಿಗೆ ಗೋಕರ್ಣದಲ್ಲಿ ಅಧಿಕೃತವಾಗಿ ಬೈಕ್ ಬಾಡಿಗೆಗೆ ನೀಡುತ್ತಿತ್ತು. ಅಧಿಕೃತವಾಗಿ ಪರವಾನಿಗೆ ಇದ್ದ ಕಾರಣ ಸಾರಿಗೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು. ಆದರೆ ಅದೇ ಕಂಪೆನಿಯವರು ಸುಮಾರು 70ಕ್ಕೂ ಹೆಚ್ಚು ಪರವಾನಿಗೆ ಹೊಂದಿದ ಬೈಕುಗಳನ್ನು ಶುಕ್ರವಾರ ಗೋಕರ್ಣಕ್ಕೆ ತೆಗೆದುಕೊಂಡು ಬಂದಿದ್ದೇ ಗಲಾಟೆಗೆ ಕಾರಣವಾಯಿತು.

ಇದೇ ವಿಷಯವಾಗಿ ಸಮಸ್ಯೆ ತಿಳಿಗೊಳಿಸಲು ಶನಿವಾರ ಗೋಕರ್ಣ ಗ್ರಾ ಪಂ ಕಚೇರಿಯಲ್ಲಿ ಆರ್ಟಿಓ ಅಧಿಕಾರಿಗಳು, ಸಿಪಿಐ, ಪಿ ಎಸ್ ಐ ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಬೈಕ್ ಬಾಡಿಗೆ ಕೊಡುವ ಶಾರದಾ ಜಟ್ಟು ಗೌಡ ಹಾಗೂ ಗಣಪತಿ ನಾಯ್ಕ, “ನಾವು ಈಗಾಗಲೇ ಅಧಿಕೃತವಾಗಿ ಪರವಾನಿಗೆ ಪಡೆದು ಬೈಕ್ ಬಾಡಿಗೆಗೆ ಕೊಡುತ್ತಿದ್ದೇವೆ. ಇದರಲ್ಲಿ ಯಾವುದೇ ಅನಧಿಕೃತ ವ್ಯವಹಾರ ಇಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಅವರೂ ಮೌಖಿಕವಾಗಿ ಒಪ್ಪಿದ್ದಾರೆ” ಎಂದು ತಿಳಿಸಿದರು.

ಹೊನ್ನಾವರ ಆರ್ಟಿಓ ನಿತ್ಯಾನಂದ ಹಿತ್ತಲಮಕ್ಕಿ ಮಾತನಾಡಿ, “ಈಗಾಗಲೇ ಬೈಕ್ ಬಾಡಿಗೆಗೆ ಕೊಡುವವರು ಅಧಿಕೃತವಾಗಿ ಕಾಗದ ಪತ್ರಗಳನ್ನು ಹಾಜರು ಮಾಡಿದ್ದಾರೆ. ಉಳಿದ ಬೈಕುಗಳ ಕಾಗದ ಪತ್ರಗಳನ್ನು ನೀಡಲು ಆದೇಶಿಸಲಾಗಿದೆ. ಇದಕ್ಕೆ 5 ದಿನದ ಗಡುವು ನೀಡಿದ್ದು, ಅಲ್ಲಿಯವರೆಗೆ ಬೈಕ್ ಬಾಡಿಗೆಗೆ ಕೊಡುವುದನ್ನು ನಿಲ್ಲಿಸಿ. ಜಿಲ್ಲಾಧಿಕಾರಿಗಳ ಹತ್ತಿರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು. ಅದೇ ರೀತಿ ರಿಕ್ಷಾದವರಿಗೂ ಮೀಟರ್ ಹಾಕುವಂತೆ, ಜನರನ್ನು ಸುಲಿಗೆ ಮಾಡದೇ ಸರಿಯಾದ ದರವನ್ನು ತೆಗೆದುಕೊಳ್ಳುವಂತೆ ಮತ್ತು ಸಾರಿಗೆ ನಿಯಮವನ್ನು ಪಾಲಿಸುವಂತೆಯೂ ತಿಳಿ ಹೇಳಿದ್ದಾರೆ.