ಫ್ಲೈ ಓವರಿನಿಂದ ಬಿದ್ದ ಬೈಕ್ ಸವಾರ ಸಾವು

ತಡೆಗೋಡೆಗೆ ಬೈಕ್ ಢಿಕ್ಕಿ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಬಿ ಸಿ ರೋಡಿನಲ್ಲಿ ಸೋಮವಾರ ತಡ ರಾತ್ರಿ ಚಾಲಕನ ನಿಯಂತ್ರಣ ಮೀರಿದ ಬೈಕೊಂದು ಮೇಲ್ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟರು. ಮೃತ ಬೈಕ್ ಸವಾರನನ್ನು ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ವರದೇಶ್ (35) ಎಂದು ಹೆಸರಿಸಲಾಗಿದೆ. ಇವರು ಸೋಮವಾರ ರಾತ್ರಿ ಸುಮಾರು 11.30ರ ಸುಮಾರಿಗೆ ಪಾಣೆಮಂಗಳೂರಿನಿಂದ ಮಂಗಳೂರು ಕಡೆಗೆ ಬೈಕ್‍ನಲ್ಲಿ ಸಂಚರಿಸುತ್ತಿದ್ದಾಗ ಬಿ ಸಿ ರೋಡು ಫ್ಲೈ ಓವರ್ ಮೇಲ್ಭಾಗದಲ್ಲಿ ಈ ಅವಘಡ ಸಂಭವಿಸಿದೆ.

ವಿದೇಶದಲ್ಲಿ ಇಲೆಕ್ಟ್ರೀಶಿಯನ್ ಆಗಿ ಉದ್ಯೋಗದಲ್ಲಿದ್ದ ವರದೇಶ್ ತನ್ನ ತಂದೆ ಮಾರಪ್ಪ ಪೂಜಾರಿ ಅವರ ನಿಧನದ ಹಿನ್ನಲೆಯಲ್ಲಿ ಕಳೆದ ವಾರವಷ್ಟೆ ಊರಿಗೆ ವಾಪಾಸು ಬಂದಿದ್ದರು. ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ತನಿಖೆ ಮುಂದುವರಿಸಿದ್ದಾರೆ.