ಬೈಕ್ ಅಪಘಾತದಲ್ಲಿ ಪತಿ ಮೃತ್ಯು ; ಪತ್ನಿ ಗಂಭೀರ, ಮಕ್ಕಳಿಬ್ಬರು ಪಾರು

 ನಮ್ಮ ಪ್ರತಿನಿಧಿ ವರದಿ

ಕುಂಬಳೆ : ಬೈಕ್ ಅಪಘಾತಕ್ಕೀಡಾಗಿ ಪತಿ ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡು ಮಕ್ಕಳಿಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಸೀತಾಂಗೋಳಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಕಟ್ಟತ್ತಡ್ಕ ಸಜಂಕಿಲ ವಿಕಾಸ್ ನಗರ ನಿವಾಸಿ ಮೊಹಮ್ಮದ್ ಅಮೀರ್ (31) ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಇವರ ಪತ್ನಿ ರಂಸೀನಾ(27)ರ ತಲೆಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೀತಾಂಗೋಳಿಯ ಇಳಿಜಾರು ರಸ್ತೆಯಲ್ಲಿ ಅಪಘಾತ ನಡೆದಿದ್ದು, ದಂಪತಿ ಕಂಬಾರಿನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾನುವಾರ ರಾತ್ರಿ ಪಾಲ್ಗೊಂಡು ಮಧ್ಯರಾತ್ರಿಯ ಬಳಿಕ 1.30ರ ವೇಳೆ  ಮರಳುತ್ತಿದ್ದಾಗ ಅಪಘಾತ ನಡೆದಿದೆ. ಇವರ ಜೊತೆಗಿದ್ದ ಮಕ್ಕಳಾದ ರಾಹಿನ್ (6) ಹಾಗೂ ರಾಹಿತ್ (11 ತಿಂಗಳು) ಅದೃಷ್ಟವಶಾತ್ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಅಪಘಾತದ ಸಂದರ್ಭ ಪುತ್ರ 11 ತಿಂಗಳ ರಾಹಿತ್ ತಾಯಿಯ ಮಡಿಲಲ್ಲೇ ಇದ್ದು, ಇನ್ನೊಂದು ಮಗು ರಾಹಿನ್ ರಸ್ತೆಯಲ್ಲಿ ಅಳುತ್ತಿರುವುದನ್ನು ಕೇಳಿ ಪರಿಸರ ನಿವಾಸಿಗಳು ದೌಡಾಯಿಸಿದರು. ಈ ವೇಳೆ ಅಪಘಾತದ ವಿವರ ಅರಿವಿಗೆ ಬಂದಿದ್ದು, ವಾಹನ ವಿರಳತೆಯಿಂದ ತಕ್ಷಣ ಆಸ್ಪತ್ರೆಗೆ ಸಾಗಿಸುವಲ್ಲಿ ತೊಡಕಾಯಿತು. ಗಾಯಗೊಂಡವರು ಸುಮಾರು 15 ನಿಮಿಷ ರಕ್ತದ ಮಡುವಲ್ಲಿ ರಸ್ತೆಯಲ್ಲೇ ಉಳಿದರು. ಬಳಿಕ ವಿಷಯ ತಿಳಿದು ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ವಿ ವಿ ಅಶೋಕನ್ ಆಗಮಿಸಿ ಗಾಯಾಳುಗಳನ್ನು ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡಿದರೂ ಈ ವೇಳೆ ಅಮೀರ್ ಕೊನೆಯುಸಿರೆಳೆದರು. ಗಂಭೀರ ಗಾಯಗೊಂಡ ರಂಸೀನಾಳನ್ನು ಬಳಿಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರ ಗಾಯಗೊಂಡ ಅಮೀರರಿಗೆ ತುರ್ತು ಚಿಕಿತ್ಸೆ ಲಭಿಸುತ್ತಿದ್ದರೆ ಪ್ರಾಣ ಉಳಿಸಬಹುದಾಗಿತ್ತೆಂದು ವೈದ್ಯರು ತಿಳಿಸಿದ್ದಾರೆ. ಅಮೀರ್ ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಮನೆಗೆ ಕರೆತಂದು ದಫನಗೈಯ್ಯಲಾಯಿತು.