ಪಾದಚಾರಿಗೆ ಬೈಕ್ ಡಿಕ್ಕಿ : ಇಬ್ಬರು ಗಂಭೀರ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ದೇವಸ್ಥಾನದ ಎದುರು ಬೈಕ್ ಡಿಕ್ಕಿಯಾಗಿ ಪಾದಚಾರಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಲ್ಕಿ ಬಳಿಯ ಕಕ್ವ ನಿವಾಸಿ ಶಾಲೆಟ್ (43) ಗಾಯಾಳು ಮಹಿಳೆ. ಮುಲ್ಕಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಬಪ್ಪನಾಡು ಹೆದ್ದಾರಿ ತಲುಪುತ್ತಿದ್ದಂತೆ ಮಹಿಳೆ ಶಾಲೆಟ್ ಹೆದ್ದಾರಿ ಕ್ರಾಸ್ ಮಾಡಲು ಯತ್ನಿಸಿದಾಗ ಬೈಕಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯ ಪತ್ರಕರ್ತರಾದ ಹರೀಶ್ ಹೆಜಮಾಡಿ ಮತ್ತಿತರರು ಸೇರಿ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಅಪಘಾತದ ರಭಸಕ್ಕೆ ಬೈಕ್ ಸವಾರ ಕಾರ್ನಾಡು ನಿವಾಸಿ ಕಾರ್ತಿಕ್ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಬೈಕ್ ಜಖಂಗೊಂಡಿದೆ.

ಕಳೆದ ಕೆಲ ತಿಂಗಳಿನಿಂದ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವಾರು ಅಪಘಾತಗಳು ನಡೆಯುತ್ತಿದ್ದು, ಹೆದ್ದಾರಿ ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಾಧು ಅಂಚನ್ ಮಟ್ಟು ಒತ್ತಾಯಿಸಿದ್ದು ಇಲ್ಲದಿದ್ದರೆ ಹೆದ್ದಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.