ಬೈಕಿಗೆ ಬಸ್ ಡಿಕ್ಕಿ : ಐವರು ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮದ ಮೈರಕಟ್ಟೆ ಎಂಬಲ್ಲಿ ಬಸ್ಸೊಂದು ತಾಂತ್ರಿಕ ವೈಫಲ್ಯತೆಗೆ ಸಿಲುಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೊೈದಿನ್ ಕುಟ್ಟಿ (38) ಎಂಬವರು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಉಪ್ಪಿನಂಗಡಿ ಸರಕಾರಿ ಮಾದರಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರೂ, ಪುತ್ತೂರು ತಾಲೂಕು ಎಸ್ ಡಿ ಎಂ ಸಿ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮೊೈದಿನ್ ಕುಟ್ಟಿ ತಮ್ಮ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿಯತ್ತ ಸಂಚರಿಸುತ್ತಿದ್ದಾಗ ಖಾಸಗಿ ಬಸ್ಸೊಂದು ತಾಂತ್ರಿಕ ವೈಫಲ್ಯತೆಗೆ ಸಿಲುಕಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಮೊೈದಿನ್ ಕುಟ್ಟಿ ವಾಹನಕ್ಕೆ ಡಿಕ್ಕಿ ಹೊಡೆಯಿತು. ಅಪಾಯವನ್ನರಿತ ಅವರು ವಾಹನದಿಂದ ಜಿಗಿದರಾದರೂ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಬಸ್ಸಿನಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.