ಬೈಕ್ ಅಪಘಾತ : ವಿದ್ಯಾರ್ಥಿ ಮೃತ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾಲೇಜು ಮುಗಿಸಿ ಮನೆ ಕಡೆಗೆ ತನ್ನ ಬೈಕಿನಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿಯ ಬೈಕ್ ಅಪಘಾತಕ್ಕೀಡಾದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟಿನ ಕಲ್ಲಾಪು ಸಮೀಪ ಗುರುವಾರ ಸಂಜೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಝಿಯಾದ್ (17) ಎಂದು ಗುರುತಿಸಲಾಗಿದೆ. ಈತ ಪಾವೂರು ಮಲಾರು ನಿವಾಸಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಮಹಮ್ಮದ್ ಮುಸ್ತಾಫ ಎಂಬವರ ಏಕೈಕ ಪುತ್ರ ಎಂದು ಗುರುತಿಸಲಾಗಿದೆ.

ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಝಿಯಾದ್ ಸ್ನೇಹಿತನ ಜತೆಗೆ ಬೈಕಿನಲ್ಲಿ ಮಂಗಳೂರಿನಿಂದ ಪಾವೂರಿಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ವಿದ್ಯಾರ್ಥಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಲ್ಲಾಪು ಸಮೀಪ ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರನ್ನು ತಪ್ಪಿಸುವ ಯತ್ನದಲ್ಲಿ ಬೈಕ್ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಝಿಯಾದ್ ರಸ್ತೆಗೆ ಉರುಳಿ ತಲೆಗೆ ಗಂಭೀರ ಏಟು ಬಿದ್ದಿದ್ದು, ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.