9.75 ಕೋಟಿ ರೂ ವಂಚನೆ : ಕರ್ನಾಟಕ ಮೂಲದ ಬಿಹಾರ ಐಎಎಸ್ ಅಧಿಕಾರಿ ಸೆರೆ

ಪಾಟ್ನ : ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಎಸ್ ಎಂ ರಾಜು ಮತ್ತು ಕೆಲವು ಮಧ್ಯವರ್ತಿಗಳ ಸಹಿತ ಇತರ 15 ಮಂದಿಯ ವಿರುದ್ಧ ಬಿಹಾರ ಜಾಗೃತ ತನಿಖಾ ತಂಡ (ವಿಐಬಿ) 9.75 ಕೋಟಿ ರೂ ಅವ್ಯಹಾರ ನಡೆಸಿದ ಪ್ರಕರಣವೊಂದು ದಾಖಲಿಸಿಕೊಂಡಿದೆ.

ಪರಿಶಿಷ್ಟ ಜಾತಿ (ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‍ಟಿ) ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನದಲ್ಲಿ ಇವರು ಇಷ್ಟೊಂದು ಮೊತ್ತದ ಅವ್ಯವಹಾರ ನಡೆಸಿದ್ದಾರೆ. ಎಸ್‍ಸಿ/ಎಸ್‍ಟಿ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಈ ಅವ್ಯವಹಾರ ನಡೆದಿದೆ.

ಬಿಹಾರದಲ್ಲಿ ಕೆಲಸ ಮಾಡುತ್ತಿದ್ದ 1991ರ ಬ್ಯಾಚಿನ ಅಧಿಕಾರಿ ರಾಜು, ಮೂಲತಃ ಕರ್ನಾಟಕದವನಾಗಿದ್ದು, ಈತನ ವಿರುದ್ಧ ಜಾಗೃತ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಸದ್ಯ ಈತ ಕಂದಾಯ ಮಂಡಳಿಯ ಸದಸ್ಯನಾಗಿದ್ದಾನೆ. ರಾಜು ವಿರುದ್ಧ ಇದು 2ನೇ ಬಾರಿ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ.

ಈ ಹಿಂದೆ, 2003ರಲ್ಲಿ ಈತನನ್ನು ಕರ್ನಾಟಕದಲ್ಲಿ ಖಾಸಗಿ ಕಾಲೇಜೊಂದರಿಂದ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಕರ್ನಾಟಕದ ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯರ ನಿರ್ದೇಶನದಂತೆ ಬಂಧಿಸಲಾಗಿತ್ತು. ವಿಚಾರಣೆ ಬಳಿಕ ರಾಜುವನ್ನು ಕರ್ನಾಟಕ ಸರ್ಕಾರದ ಶಿಫಾರಸು ಮೇರೆಗೆ ಬಿಹಾರಕ್ಕೆ ವರ್ಗಾಯಿಸಲಾಗಿತ್ತು.

“ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಹಂಚಲು ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನವನ್ನು ಈತ ನಕಲಿ ದಾಖಲೆಪತ್ರ ಸಿದ್ಧಪಡಿಸಿ ಅವ್ಯವಹಾರ ನಡೆಸಿದ್ದ” ಎಂದು ಮೂಲಗಳು ಹೇಳಿವೆ.