ಟಿ -20 ಸರಣಿ ಗೆಲುವಿಗೆ ಇಂದು `ಬಿಗ್ ಫೈಟ್’

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

`ಗೆಲುವಿನ ಜಪ’ ಮಾಡಿಕೊಂಡಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂದು ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುವ ಈ ಪಂದ್ಯ ಉಭಯತಂಡಗಳಿಗೂ ನಿರ್ಣಾಯಕವಾಗಲಿದೆ. ಈಗಾಗಲೇ ಇತ್ತಂಡಗಳು ಸರಣಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ 1-1ರ ಸಮಬಲ ಸಾಧಿಸಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಸರಣಿ ಗೆಲುವಿಗಾಗಿ `ಬಿಗ್ ಫೈಟ್’ ನಡೆಸಲಿವೆ.

ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿರುವ ಆಸ್ಟ್ರೇಲಿಯಾ ತಂಡ ಈಗ ಟ್ವೆಂಟಿ-20 ಸರಣಿಯಲ್ಲಿ ಪ್ರಶಸ್ತಿ ಜಯಿಸಿ ಹಿಂದಿನ ಸೋಲಿಗೆ ತಿರುಗೇಟು ನೀಡುವ ಛಲವನ್ನು ಹೊಂದಿದೆ. ರಾಂಚಿಯಲ್ಲಿ ಮಳೆಯ ಅವಕೃಪೆಯಿಂದ ಪಂದ್ಯ ಸೋತಿದ್ದ  ಆಸ್ಟ್ರೇಲಿಯಾ ಗೌಹಾತಿಯಲ್ಲಿ ನಡೆದ ದ್ವಿತೀಯ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಪ್ರದರ್ಶಿಸಿದೆ. ಈಗ ಸರಣಿಯ ಕೊನೆಯ ಪಂದ್ಯವನ್ನು ಜಯಿಸುವ ಪೂರ್ಣವಿಶ್ವಾಸವನ್ನು ಆಸ್ಟ್ರೇಲಿಯಾ ತಂಡ ಹೊಂದಿದೆ.

ಮೊದಲ ಪಂದ್ಯದಲ್ಲಿ ಭಾರತೀಯ ತಂಡದ ಬೌಲರುಗಳು ಅದ್ಭುತ ಪ್ರದರ್ಶನದ ಮೂಲಕ ಸಕತ್ ಮಿಂಚಿದ್ದರು. 18.4 ಓವರುಗಳಲ್ಲಿ ಟ್ವೆಂಟಿ -20 ಪಂದ್ಯಗಳ ಸ್ಪೆಷಲಿಷ್ಟ್ ಆಸ್ಟ್ರೇಲಿಯಾ ತಂಡ ಗಳಿಸಿದ್ದು 118 ರನ್ನುಗಳನ್ನು. ಆದರೆ ನಂತರದ ಪಂದ್ಯದಲ್ಲಿ ಇದು ಉಲ್ಟಾ ಹೊಡೆಯಿತು. ಆಸ್ಟ್ರೇಲಿಯನ್ ಬೌಲರುಗಳು ರಾಂಚಿಯಲ್ಲಿ ಮೊದಲ ಬಾರಿಗೆ ಪ್ರಭುತ್ವ ಸಾಧಿಸಿ ಭಾರತೀಯ ಬ್ಯಾಟ್ಸಮ್ಯಾನುಗಳನ್ನು ಪೆವೆಲಿಯನ್ ಪೆರೇಡ್ ನಡೆಸುವಂತೆ ಮಾಡಿದರು.

ಟಿ-20 ಪಂದ್ಯಗಳ ವಿಷಯಕ್ಕೆ ಬಂದರೆ, ಭಾರತೀಯ ತಂಡವೇ ಬಲಾಡ್ಯ. ಉಭಯತಂಡಗಳು ಇದುವರೆಗೆ 15 ಟ್ವೆಂಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 10ರಲ್ಲಿ ಜಯಗಳಿಸಿದೆ. ಆಸ್ಟ್ರೇಲಿಯಾ 5ರಲ್ಲಿ ಗೆದ್ದಿದೆ.    ಆಸ್ಟ್ರೇಲಿಯನ್ ತಂಡದ ಹಂಗಾಮಿ ನಾಯಕ ಡೇವಿಡ್ ವಾರ್ನರ್ ಮೂರನೇ ಪಂದ್ಯದಲ್ಲಿ ಅತ್ಯಂತ ಶ್ರಮವಹಿಸಿ ಗೆಲುವು ಪಡೆಯುತ್ತೇವೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಗೆಲುವು ನಮ್ಮದೇ ಎಂದಿದ್ದಾರೆ. ಅಂತೂ ಹೇಳಿಕೆಗಳು ಫಲಿತಾಂಶವನ್ನು ನಿರ್ಧರಿಸುವುದಿಲ್ಲ. ಆಟಗಾರರ ಉತ್ತಮ ಪ್ರದರ್ಶನ ಮಾತ್ರ ತಂಡದ ಗೆಲುವಿಗೆ ಕಾರಣವಾಗಬಲ್ಲದು. ಈ ಪಂದ್ಯದಲ್ಲಿ ಜಯ ಉಭಯತಂಡಗಳಿಗೂ ಅನಿವಾರ್ಯವಾಗಿರುವುದರಿಂದ ಇಲ್ಲಿ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.