ಭಿನ್ನಕೋಮು ಜೋಡಿ ಮದುವೆಗೆ ಅಡ್ಡಿ

ಘಟನಾ ಸಂದರ್ಭ ಬಂಟ್ವಾಳ ಉಪನೋಂದಣಾ ಕಚೇರಿ ಆವರಣದಲ್ಲಿ ಪೊಲೀಸ್ ಬಂದೋಬಸ್ತ್

ಸಂಘಟನೆ ಯುವಕರು ಜಮಾಯಿಸಿ ಬಂಟ್ವಾಳದಲ್ಲಿ ಆತಂಕದ ವಾತಾವರಣ

ಯುವತಿ ಅಣ್ಣನ ಹೇಳಿಕೆ ಬಳಿಕ ಪ್ರಕರಣ ಸುಖಾಂತ್ಯ

 

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಪರಸ್ಪರ ಪ್ರೀತಿಸಿದ್ದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದ ವೇಳೆ ಮಾಹಿತಿ ಸೋರಿಕೆಯಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಮಾಯಿಸಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಬಿ ಸಿ ರೋಡಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ನಿವಾಸಿ ಮುಸ್ಲಿಂ ಯುವಕ ಹಾಗೂ ಮಡಿಕೇರಿ ಮೂಲದ ಹಿಂದೂ ಯುವತಿ ಕಳೆದ ಕೆಲ ಸಮಯಗಳಿಂದ ಪರಸ್ಪರ ಪ್ರೀತಿಸಿದ್ದು, ತಮ್ಮ ವಿವಾಹ ನೋಂದಣಿಗಾಗಿ ಬಿ ಸಿ ರೋಡಿನ ಉಪ ನೋಂದಣಿ ಕಚೇರಿಗೆ ಸೋಮವಾರ ಬೆಳಿಗ್ಗೆ ಬಂದಿದ್ದರು. ಈ ಸಂದರ್ಭ ಮಾಹಿತಿ ಸೋರಿಕೆಯಾಗಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಬಿ ಸಿ ರೋಡು ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಜಮಾಯಿಸಿದರು. ಈ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಇನ್ನೊಂದು ಕೋಮಿಗೆ ಸೇರಿದ ಯುವಕರೂ ಅಲ್ಲಲ್ಲಿ ಜಮಾಯಿಸತೊಡಗಿದಾಗ ಸ್ಥಳದಲ್ಲಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಬಗ್ಗೆ ತಿಳಿದುಕೊಂಡ ಯುವಕ ಸ್ಥಳದಿಂದ ಎಸ್ಕೇಪ್ ಆಗುವಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೇ ಕೂರಿಸಿ ಬಂದೋಬಸ್ತ್ ಒದಗಿಸಿದ್ದು, ನಂತರ ಯುವತಿಯ ಮನೆ ಮಂದಿಯನ್ನು ಸಂಪರ್ಕಿಸಿ, ಬರಮಾಡಿಕೊಂಡರು.

ಸ್ಥಳಕ್ಕಾಗಮಿಸಿದ ಯುವತಿಯ ಸಹೋದರ ಈ ಬಗ್ಗೆ ಪೊಲೀಸರಿಗೆ ಸ್ಪಷ್ಟವಾದ ಮಾಹಿತಿ ನೀಡಿದ್ದು, ತನ್ನ ಸಹೋದರಿ ಹಾಗೂ ಮುಸ್ಲಿಂ ಯುವಕ ಪರಸ್ಪರ ಪ್ರೀತಿಸಿದ್ದು, ಇದೀಗ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ವಿವಾಹ ಮಾಡಿಕೊಳ್ಳಲು ನಿಶ್ಚಯಿಸಿದ್ದಾರೆ. ಇದಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.

 


ಕಚೇರಿ ಒಳಗಿನಿಂದಲೇ ಮಾಹಿತಿ ಸೋರಿಕೆ ?

ಪರಸ್ಪರ ಪ್ರೀತಿಸಿದ್ದ ಹಿಂದೂ-ಮುಸ್ಲಿಂ ಜೋಡಿ ವಿವಾಹ ನೋಂದಣಿಗಾಗಿ ಬಿ ಸಿ ರೋಡು ಉಪನೋಂದಣಿ ಕಚೇರಿಗೆ ಸೋಮವಾರ ಬೆಳಿಗ್ಗೆಯೇ ಬಂದಿದ್ದರು. ಕೆಲಹೊತ್ತಿನ ಬಳಿಕ ನಿರ್ದಿಷ್ಟ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಈ ಬಗ್ಗೆ ಮಾಹಿತಿ ದೊರೆತಿದ್ದು, ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿ ಒಳಗಿನಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂದರ್ಭ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರಿಂದ ನಿರ್ಮಾಣವಾದ ಆತಂಕ ಪರಿಸ್ಥಿತಿಯನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕಾದ ಪೊಲೀಸರು ಕೂಡಾ ಖಡಕ್ ಕ್ರಮ ಕೈಗೊಳ್ಳದೆ ಕೋಮುವಾದಿ ಸಂಘಟನೆ ಕಾರ್ಯಕರ್ತರೊಂದಿಗೆ ಸಲುಗೆಯಿಂದ ಮಾತಿಗೆ ನಿಂತ ದೃಶ್ಯವೂ ಕಂಡು ಬಂದ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ.