ಗರುಡ ಮಹಾಕಾಳಿ ದೇವಸ್ಥಾನ ಕಳವಿಗೆ ಯತ್ನ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಅರಳ ಮತ್ತು ಕೊಯಿಲ ಎರಡು ಗ್ರಾಮಗಳ ಗ್ರಾಮದೇವತೆ ಶ್ರೀ ಗರುಡ ಮಹಾಕಾಳಿ ದೇವಸ್ಥಾನಕ್ಕೆ ನುಗ್ಗಿದ ತಂಡ ಕಳ್ಳತನಕ್ಕೆ ಯತ್ನಿಸಿದ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ದೇವಸ್ಥಾನದ ಅರ್ಚಕ ಹರೀಶ ಭಟ್ ಎಂದಿನಂತೆ ಮಂಗಳವಾರ ರಾತ್ರಿ ಸುಮಾರು ಏಳೂವರೆ ಗಂಟೆಗೆ ಪೂಜೆ ಮುಗಿಸಿ ಮನೆಗೆ ತೆರಳಿದ್ದು, ಬುಧವಾರ ಬೆಳಿಗ್ಗೆ 10 ಗಂಟೆಗೆ ಪೂಜೆಗೆಂದು

ಆಗಮಿಸಿದಾಗ ದೇವಳದ ಎದುರು ಬಾಗಿಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ. ತಕ್ಷಣ ಅವರು ದೇವಳದ ಆಡಳಿತ ಮೊಕ್ತೇಸರ ಎ ರಾಜೇಂದ್ರ ಶೆಟ್ಟಿ ಮತ್ತು ಸಮಿತಿ ಸದಸ್ಯ ಜಗದೀಶ ಆಳ್ವ ಅಗ್ಗೊಂಡೆ ಅವರ ಮೂಲಕ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ದೇವಳದ ಸುತ್ತು ಪೌಳಿ ಎದುರು ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು ಬಳಿಕ ತೀರ್ಥ ಮಂಟಪದಲ್ಲಿದ್ದ ಸ್ಟೀಲ್ ಕಾಣಿಕೆ ಡಬ್ಬಿಯನ್ನು ತೆರೆಯಲು ಯತ್ನ ನಡೆಸಿರುವುದು ಕಂಡು ಬಂದಿದೆ. ಇದೇ ವೇಳೆ ಗರ್ಭಗುಡಿ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿ ಅಲ್ಲಿಯೂ ಚಿನ್ನಾಭರಣಕ್ಕಾಗಿ ತಡಕಾಡಿದ್ದಾರೆ. ಆದರೆ ಗರ್ಭಗುಡಿಯಲ್ಲಿ ಬೃಹತ್ ಗಾತ್ರದ ನಾಲಗೆ ಹೊರಚಾಚಿ ಅಷ್ಟಭುಜಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದು ನಿಂತಿರುವ ಗರುಡ ಮಹಾಕಾಳಿ ದೇವರ ದಾರು ವಿಗ್ರಹ ಕಂಡು ಕಳ್ಳರು ಭಯಭೀತಗೊಂಡು ಕಳ್ಳರು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ವಿಗ್ರಹದ ಎದುರಿನಲ್ಲೇ ಇದ್ದ ಬೆಳ್ಳಿ ಲೋಟ, ತಂಬಿಗೆ, ಚಮಚ, ದೀಪ ಮತ್ತಿತರ ಬೆಳ್ಳಿ ಸಾಮಾಗ್ರಿ ಸಹಿತ ಭಕ್ತರು ಸೇವೆಗೆಂದು ಪಾವತಿಸಿದ ಸುಮಾರು 2 ಸಾವಿರಕ್ಕೂ ಮಿಕ್ಕಿ ಮೊತ್ತದ ನೋಟು ಹೊಂದಿರುವ ಪುಟ್ಟ ಸ್ಟೀಲ್ ಪೆಟ್ಟಿಗೆಯನ್ನು ಕಳ್ಳರು ಮುಟ್ಟದಿರುವುದು ಸ್ಥಳೀಯರ ಅಭಿಪ್ರಾಯವನ್ನು ಬಲಪಡಿಸಿದೆ. ಇನ್ನೊಂದೆಡೆ ಇಲ್ಲಿನ ಮಹಾಗಣಪತಿ ದೇವರ ಗುಡಿ ಎದುರಿನಲ್ಲಿದ್ದ ಸ್ಟೀಲ್ ಕಾಣಿಕೆ ಡಬ್ಬಿಯೊಂದು ದೇವಳದ ಹೊರಗೆ ರಸ್ತೆ ಬದಿ ಬಿದ್ದಿರುವುದು ದೊರೆತಿದೆ. ಭಾರೀ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಈ ದೇವಸಾನವು ಕಳೆದ ಆರು ತಿಂಗಳ ಹಿಂದೆಯಷ್ಟೇ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ.