ರಿಕ್ಷಾ ಅಡ್ಡಾದಿಡ್ಡಿ ಪ್ರಶ್ನಿಸಿದ ಉದ್ಯಮಿಗೆ ಹಲ್ಲೆ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇರಳಕಟ್ಟೆ ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ರಿಕ್ಷಾ ಚಲಾಯಿಸಿದ್ದನ್ನು ಪ್ರಶ್ನಿಸಿದ ಉದ್ಯಮಿಗೆ ರಿಕ್ಷಾ ಚಾಲಕ ಸಹಿತ 10 ಮಂದಿಯ ತಂಡ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಬಳಿಕ ಗಲಾಟೆ ಕೋಮುದ್ವೇಷಕ್ಕೆ ತಿರುಗಿ ಕೆಲವು ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡು ಘಟನೆಗೆ ಸಂಬಂಧಿಸಿ ರೌಡಿಶೀಟರ್ ನಾಸಿರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಉದ್ಯಮಿ ಕುತ್ತಾರ್ ನಿವಾಸಿ ಹರೀಶ್ ಅವರ ನೆರೆಮನೆಯ ಇಂದಿರಾ ಅವರಿಗೆ ತೆಂಗಿನ ಕಾಯಿ ಬಿದ್ದು ಗಾಯವಾಗಿತ್ತು. ಹೀಗಾಗಿ ಅವರು ತಮ್ಮ ಕಾರಿನಲ್ಲಿ ಇಂದಿರಾರನ್ನು ಕರೆದುಕೊಂಡು ದೇರಳಕಟ್ಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ರಿಕ್ಷಾ ಅಡ್ಡಾದಿಡ್ಡಿಯಾಗಿ ಬಂದಿದ್ದು, ಹರೀಶ್ ಮತ್ತು ರಿಕ್ಷಾ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿತ್ತು.

ಹರೀಶ್ ಮತ್ತೆ ಆಸ್ಪತ್ರೆಯಿಂದ ಬಂದಾಗ ರಿಕ್ಷಾ ಚಾಲಕ ಸಹಿತ ಮದನಿ ನಗರದ ನಿವಾಸಿ ಹಲವು ಪ್ರಕರಣಗಳ ಆರೋಪಿ ನಾಸಿರ್ ಸಹಿತ 10 ಮಂದಿ ತಂಡ ಹರೀಶ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ಕುತ್ತಾರಿನ ಹಿಂದೂ ಸಂಘಟನೆಯ ಯುವಕರೂ ಸ್ಥಳದಲ್ಲಿ ಸೇರಿದ್ದು ಎರಡು ತಂಡದ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮದ್ಯೆ ಪ್ರವೇಶಿಸಿ ನಾಸಿರನನ್ನು ವಶಕ್ಕೆ ತೆಗೆದುಕೊಂಡು ಉಳಿದವರು ಪತ್ತೆಗೆ ಬಲೆ ಬೀಸಿದ್ದಾರೆ.


ಮೊಬೈಲ್ ಅಂಗಡಿ ಸಿಬ್ಬಂದಿಗೆ ತಂಡ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಸಿಟಿಬಸ್ ನಿಲ್ದಾಣ ಬಳಿಯ ಸದಾನಂದ ಟವರ್ಸಿನಲ್ಲಿರುವ ನಮ್ಮ ಮೊಬೈಲ್ ಅಂಗಡಿಯ ವಾಚ್ಮನ್, ಸೇಲ್ಸಮನ್ ಹಾಗೂ ಇನ್ನೊಬ್ಬಗೆ ಏಳು ಮಂದಿಯ ತಂಡ ಎರಡು ಕಾರುಗಳಲ್ಲಿ ಬಂದು ಹಲ್ಲೆ ನಡೆಸಿದೆ.

ಮೊಬೈಲ್ ಅಂಗಡಿಯ ವಾಚ್ಮನ್ ಯಮುನಾ, ಸೇಲ್ಸಮನ್ ಉಡುಪಿ ನಗರದ ಅಂಬಲಪಾಡಿಯ ಕಪ್ಪೆಟ್ಟು ನಿವಾಸಿ ಸಂದೀಪ್ ಪೂಜಾರಿ ಹಾಗೂ ಪುರುಷೋತ್ತಮ ಎಂಬವರು ಹಲ್ಲೆಗೊಳಗಾದವರು. ಕೆಮ್ಮಣ್ಣು ಸಮೀಪದ ಹೂಡೆಯ ಜದೀದ್ ಜಾಮೀಯಾ ಮಸೀದಿ ಬಳಿಯ ನಿವಾಸಿ ಕೆ ಮಹಮ್ಮದ್ ಆಸೀಫ್, ಆತನ ಸ್ನೇಹಿತರಾದ ಮಾಹಿರ್, ಅರ್ಫಾತ್, ರಫೀಕ್, ಅಹಮದ್, ಹಿದಾಯತ್ ಮತ್ತು ಸುಹಾನ್ ಎಂಬವರು ಹಲ್ಲೆ ನಡೆಸಿದ ಆರೋಪಿಗಳು.

ಬೆಂಗಳೂರು ನೊಂದಾಯಿತ ಸ್ಕಾರ್ಫೀಯೋ ಹಾಗೂ ಇನ್ನೋವಾ ಕಾರುಗಳಲ್ಲಿ ಬಂದ ತಂಡವು ಹಲ್ಲೆ ನಡೆಸಿದೆ ಎಂದು ದೂರಲಾಗಿದೆ. ಕಳೆದ ಕೆಲ ದಿನಗಳಲ್ಲಿ ಮಧ್ಯ ರಾತ್ರಿ ಹೊತ್ತು ಆರೋಪಿಗಳ ತಂಡವು ಎರಡು ಕಾರುಗಳಲ್ಲಿ ಉಡುಪಿ ನಗರದಲ್ಲಿ ತಿರುಗಾಡುತ್ತಾ, ನಗರದ ಬಸ್ ನಿಲ್ದಾಣ, ಇನ್ನಿತರ ಸ್ಥಳಗಳಲ್ಲಿ ಮಲಗಿರುವ ಅಮಾಯಕ ಕೂಲಿ ಕಾರ್ಮಿಕರಿಗೆ ವಿನಾಕಾರಣ ಹಲ್ಲೆ ನಡೆಸಿ, ಗೂಂಡಾಗಿರಿ ಪ್ರದರ್ಶಿಸುತ್ತಾ ಪರಾರಿಯಾಗುತ್ತಿದ್ದರು. ಇದನ್ನು ಕಾದು ಕುಳಿತು ಪ್ರಶ್ನಿಸಿದ ಯಮುನಾ, ಸಂದೀಪ್ ಮತ್ತು ಪುರುಷೋತ್ತಮಗೆ ತಂಡವು ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.

ಆರೋಪಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರತಿದೂರು ಕೂಡ ದಾಖಲಾಗಿದೆ. ಸಂದೀಪ್, ಯಮುನಾ ಮತ್ತು ಪುರುಷೋತ್ತಮ ಸೇರಿಕೊಂಡು ಮಹಮ್ಮದ್ ಆಸೀಫ್, ಮಾಹಿರ್, ಅರ್ಫಾತ್ ರಫೀಕ್, ಹಿದಾಯತ್ ಮತ್ತು ಸುಹಾನಗೆ ಹಲ್ಲೆ ಮಾಡಿದ್ದು, ಆ ಪೈಕಿ ಮಹಮ್ಮದ್ ಆಸೀಫ್ ಮತ್ತು ಅರ್ಫಾತಗೆ ಗಾಯವಾಗಿದೆ ಎಂದು ದೂರಲಾಗಿದೆ.