ಕೋರ್ಟ್ ಆದೇಶ ಉಲ್ಲಂಘಿಸಿ ಬೇಲಿ ಕಿತ್ತೆಸೆದು ಜಮೀನು ಸ್ವಾಧೀನ ಯತ್ನ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಮಹಿಳೆಯೊಬ್ಬರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸ್ವಾಧಿನಪಡಿಸಿಕೊಳ್ಳಲು ಯತ್ನಿಸಿದ್ದಲ್ಲದೆ ಪ್ರಶ್ನಿಸಿದ್ದಕ್ಕೆ ಜೀವಬೆದರಿಕೆಯೊಡ್ಡಿದ ಘಟನೆ  ಅಳದಂಗಡಿ ಸನಿಹದ ಸುಲ್ಕೇರಿ ಗ್ರಾಮದಲ್ಲಿ ನಡೆದಿದೆ.

ಸುಲ್ಕೇರಿ ಗ್ರಾಮದ ಪಿಲಿಕುಡೇಲು ಎಂಬಲ್ಲಿ ಬಿ ರಮಣಿ ಎಂಬುವರು 1.18 ಎಕ್ರೆ ಜಮೀನನ್ನು ಹೊಂದಿದ್ದು ಈ ಜಮೀನಿನ ಸನಿಹದಲ್ಲಿಯೇ ಗ್ರಾಮದ ಮಹಮ್ಮಾಯಿ ಮನೆಯ ವಿಠಲ ಶೆಟ್ಟಿ ಎಂಬುವರು ಹಾಗೂ ಇತರ ಮೂವರು ಸೇರಿ  ಜಮೀನನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿದ್ದಾರೆ.

ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ವಿರುದ್ದ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಆದೇಶ ಊರ್ಜಿತದಲ್ಲಿದ್ದರೂ ಡಿ 5ರಂದು ಯಾರೂ ಇಲ್ಲದ ವೇಳೆ ಜಮೀನಿಗೆ ಪ್ರವೇಶಿಸಿ ಬೇಲಿಯನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ವಿಚಾರಿಸಿದಾಗ ವಿಠಲ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗೂ “ಈ ಬಾರಿ ದಲಿತರ ಮೂಲಕ ಬೇಲಿ ತೆಗೆಸಿದ್ದೇನೆ. ಇನ್ನು ಮುಂದಕ್ಕೆ ನೀನೇನಾದರೂ ತಕರಾರು ಮಾಡಿದರೆ ದಲಿತರ ಮೂಲಕ ನಿನ್ನ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ ಅಲ್ಲದೆ ನಿನ್ನ ಕೈ-ಕಾಲು ಮುರಿಸುತ್ತೇನೆ”  ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಬೇಲಿ ಕಿತ್ತೊಗೆಯುವ ಮತ್ತಿತರ ದಾಂಧಲೆ ದೃಶ್ಯಗಳು ಸೀಸಿ ಟೀವಿಯಲ್ಲಿ ದಾಖಲಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.