ಭೂತಾನದಲ್ಲಿ ಶೌಚಾಲಯ ಕ್ರಾಂತಿ

 ದೇಶದ ಹಲವಾರು ಗ್ರಾಮಗಳಲ್ಲಿ ಸ್ಥಳೀಯ ಜನರು ತಮ್ಮದೇ ಆದ ವೇದಿಕೆಗಳನ್ನು ರಚಿಸಿಕೊಳ್ಳುವ ಮೂಲಕ  ನೀರು ಸರಬರಾಜು ಮತ್ತು ಶೌಚಾಲಯ, ಶುಚಿತ್ವವನ್ನು ಕುರಿತು ಚರ್ಚೆ ನಡೆಸುವ ಒಂದು ಪರಂಪರೆಯನ್ನೂ ಬೆಳೆಸಲಾಗಿದೆ  

ಇತ್ತೀಚಿನವರೆಗೂ ಭೂತಾನದ ದಾಂಗಚು ಗ್ರಾಮದಲ್ಲಿನ ಜನರು ಶೌಚಾಲಯ ಬಳಕೆಗೆ ತಮ್ಮ ನೆರೆಮನೆಯ ತಿಪ್ಪೆಯನ್ನೇ ಬಳಸುತ್ತಿದ್ದರು. ಮನೆಗೆ ಅತಿಥಿಗಳು ಬಂದರೆ ಶೌಚಾಲಯ ಇಲ್ಲದ ಕಾರಣ ಆಹ್ವಾನಿಸುವುದಕ್ಕೂ ಮುಜುಗರವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ.  ಭೂತಾನದ ಆರೋಗ್ಯ ಸಚಿವಾಲಯದ ಆಶ್ರಯದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆ ಕೈಗೊಂಡ ಶೌಚಾಲಯ ಕ್ರಾಂತಿಯ ಪರಿಣಾಮವಾಗಿ ಕಳೆದ ವರ್ಷದಲ್ಲಿ ದಾಂಗಚು ಗ್ರಾಮದಲ್ಲಿ ಪ್ರತಿಯೊಂದು ಮನೆಯಲ್ಲೂ ಒಂದು ಶೌಚಾಲಯ ನಿರ್ಮಿಸಲಾಗಿದೆ.

ಜನರ ಬಳಿ ದುಬಾರಿಯಾದ ಮೊಬೈಲ್ ಇದ್ದರೂ ಅತ್ಯಗತ್ಯವಾದ ಶೌಚಾಲಯ ಇಲ್ಲದಿರುವುದನ್ನು ಜನತೆಗೆ ಹೇಳಿ ಜಾಗೃತಿ ಮೂಡಿಸುವ ಮೂಲಕ ಈ ಕ್ರಾಂತಿಯನ್ನು ಸಾಧಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಮತ್ತು ಇಂಜಿನಿಯರಿಂಗ್ ವಿಭಾಗದ ಕಾರ್ಯವಾಹಕ ಇಂಜಿನಿಯರ್ ವೈ ಬಿ ಯೋನ್ಜಾನ್ ಅವರ ಪ್ರಕಾರ 2015ರಲ್ಲಿ ಸಮೀಕ್ಷೆಯಲ್ಲಿ ದೇಶದ ಶೇ 74ರಷ್ಟು ಕುಟುಂಬಗಳು ಶೌಚಾಲಯ ಹೊಂದಿವೆ. 2018ರ ವೇಳೆಗೆ ಶೇ 80ರಷ್ಟು ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಗುರಿ ಸಾಧಿಸಲು ಯತ್ನಿಸಲಾಗುತ್ತಿದೆ.

ಇದು ಭೂತಾನದ ಇತಿಹಾಸದಲ್ಲಿ ಮಹತ್ತರ ಕ್ರಾಂತಿಕಾರಕ ಬೆಳವಣಿಗೆಯಾಗಿದೆ. ಈ ಮೊದಲು ಶೌಚಾಲಯಗಳು ಶುಚಿಯಾಗಿವೆಯೋ ಇಲ್ಲವೊ, ಬಳಸಲಾಗುತ್ತಿದೆಯೋ ಇಲ್ಲವೋ ಎಂಬ ಸಮೀಕ್ಷೆಯನ್ನೂ ನಡೆಸುತ್ತಿರಲಿಲ್ಲ. ಹಾಗಾಗಿ ಬಳಕೆಯಲ್ಲೇ ಇಲ್ಲದ ಶೌಚಾಲಯಗಳನ್ನೂ ಸೇರಿ ಶೇ 95ರಷ್ಟು ಮನೆಗಳಲ್ಲಿ ಶೌಚಾಲಯ ಇವೆ ಎಂದು ಘೋಷಿಸಲಾಗಿತ್ತು. ಸಾಧಾರಣ ಶೌಚಾಲಯದಲ್ಲಿ ಮನೆಯ ಸದಸ್ಯರು ತಮ್ಮ ತ್ಯಾಜ್ಯದಿಂದ ದೂರ ಇರಲು ಸಾಧ್ಯವಾಗುತ್ತದೆ. ಆದರೆ ಇದು ಉತ್ತಮ ಆರೋಗ್ಯದ ದೃಷ್ಟಿಯಿಂದ ಸಾಕಾಗುವುದಿಲ್ಲ. ಸುಧಾರಿತ ಶೌಚಾಲಯಗಳು ಕೇವಲ ಶೇ 58ರಷ್ಟಿತ್ತು.

ಮೂಲ ಸಮಸ್ಯೆ ಇದ್ದುದು ಭೂತಾನದ 2002ರ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಕ್ಷೇತ್ರದ ನೀತಿಗಳಲ್ಲಿ. ಸುರಕ್ಷಿತ ನೀರು ಸರಬರಾಜು ಮಾಡುವಲ್ಲಿ ಈ ನೀತಿ ಯಶಸ್ವಿಯಾಗಿದ್ದರೂ ಶೌಚಾಲಯಗಳಲ್ಲಿ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಎಚ್ಚೆತ್ತ ಭೂತಾನ್ ಸರ್ಕಾರ 2008ರಲ್ಲಿ ಲೂನ್ಟೆ, ಪೆಮಾ ಗಾಟ್ಷಿಲ್, ಸರ್ಪಂಗ್ ಮತ್ತು ಗಾಸಾ ಜಿಲ್ಲೆಗಳಲ್ಲಿ ಉತ್ತಮ ಗುಣಮಟ್ಟದ, ಆರೋಗ್ಯಕರವಾದ ಶೌಚಾಲಯ ನಿರ್ಮಾಣದ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿತ್ತು.

ಒಂದು ಸುಧಾರಿತ ಶೌಚಾಲಯ ನಿರ್ಮಿಸಲು ನಾಲ್ಕೂವರೆ ಸಾವಿರ ರೂಪಾಯಿಯಿಂದ  ಎಂಟು ಸಾವಿರ ರೂಪಾಯಿವರೆಗೆ ಖರ್ಚಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಬಹುತೇಕ ಗ್ರಾಮೀಣ ಜನತೆಗೆ ಈ ಮೊತ್ತದ ಹಣ ಹೊಂದಿಸುವುದು ಕಷ್ಟವಾಗುತ್ತಿತ್ತು. ಹಾಗಾಗಿ ಉತ್ತಮ ಗುಣಮಟ್ಟದ ಸುಧಾರಿತ ಶೌಚಾಲಯವನ್ನು ಹೊಂದುವುದರಿಂದ ಉಂಟಾಗುವ ಉಪಯೋಗಗಳನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮಹತ್ಕಾರ್ಯವಾಗಿತ್ತು.

ಸುಮಾರು 50 ಆರೋಗ್ಯ ಅಧಿಕಾರಿಗಳು ಮತ್ತು ನಾಲ್ಕು ಪೂರ್ವ ಜಿಲ್ಲೆಗಳ ಸ್ಥಳೀಯ ನಾಯಕರಿಗೆ ಶೇ 100ರಷ್ಟು ಶೌಚಾಲಯ ನಿರ್ಮಾಣ ಮಾಡಿದ್ದಕ್ಕಾಗಿ ಪ್ರಶಸ್ತಿ  ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗಿತ್ತು. ಈ ಸಾಧನೆಗೆ ಸ್ಥಳಿಯ ಜನತೆ ಮತ್ತು ಅಧಿಕಾರಿಗಳ ದಕ್ಷತೆ ಮತ್ತು ಬದ್ಧತೆಯೇ ಕಾರಣ ಎಂದು ಸರ್ಕಾರ ಹೇಳಿದೆ.

ಆರೋಗ್ಯ ಅಧಿಕಾರಿಗಳು ಮತ್ತು ಸ್ಥಳಿಯ ನಾಯಕರುಗಳು ಶೌಚಾಲಯ ನಿರ್ಮಾಣಕ್ಕೆ ಶ್ರಮಿಕರನ್ನೂ ಒದಗಿಸುವಲ್ಲಿ ನೆರವಾಗಿದ್ದರು. ಈ ಕಾರ್ಯಯೋಜನೆಯ ಮೂಲ ಉದ್ದೇಶ ಬಯಲು ಶೌಚಾಲಯವನ್ನು ನಿರ್ನಾಮ ಮಾಡುವುದೇ ಆಗಿದೆ.

ದೇಶದ ಹಲವಾರು ಗ್ರಾಮಗಳಲ್ಲಿ ಸ್ಥಳೀಯ ಜನರು ತಮ್ಮದೇ ಆದ ವೇದಿಕೆಗಳನ್ನು ರಚಿಸಿಕೊಳ್ಳುವ ಮೂಲಕ  ನೀರು ಸರಬರಾಜು ಮತ್ತು ಶೌಚಾಲಯ, ಶುಚಿತ್ವವನ್ನು ಕುರಿತು ಚರ್ಚೆ ನಡೆಸುವ ಒಂದು ಪರಂಪರೆಯನ್ನೂ ಬೆಳೆಸಲಾಗಿದೆ. ಈ ಮಹತ್ತರ ಯೋಜನೆಗಳ ಮೂಲಕ ಭೂತಾನ್ ಕೇವಲ ಶೌಚಾಲಯ ನಿರ್ಮಾಣಕ್ಕೆ ಮಾತ್ರ ಗಮನ ಕೊಡದೆ  ಶುಚಿತ್ವ ಮತ್ತು ಉತ್ತಮ ಆರೋಗ್ಯ ನಿರ್ವಹಣೆಗೂ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದೆ.