ಭೂಪಾಲ್ ಎನ್ಕೌಂಟರ್ : ನ್ಯಾಯ ಇನ್ನೂ ಮರೀಚಿಕೆ

ಇದೇ ವೇಗದಲ್ಲಿ ಮುಂದುವರೆದರೆ ತನಿಖಾ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು.

  • ರಾಕೇಶ್ ದತ್

“ಅವನಿನ್ನೂ ಬದುಕಿದ್ದಾನೆ, ಅವನನ್ನು ಕೊಲ್ಲು” ಎಂದು ಭೂಪಾಲದ ಗುಡ್ಡದ ಮೇಲೆ ನಿಂತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅರಚಿದ್ದನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕನೊಬ್ಬನ ಸಾಹಸದಿಂದ ಭೂಪಾಲದಲ್ಲಿ ನಡೆದ ನಕಲಿ ಎನ್ಕೌಂಟರ್ ಪ್ರಕರಣ ಜಗಜ್ಜಾಹೀರಾಗಿತ್ತು. ಆದರೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಏನೂ ನಡೆದೇ ಇಲ್ಲವೆಂಬಂತೆ ಮೌನ ವಹಿಸಿದ್ದು ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ.

ಭೂಪಾಲದ ಕೇಂದ್ರ ಕಾರಾಗೃಹದಿಂದ ಪರಾರಿಯಾಗುತ್ತಿದ್ದರೆನ್ನಲಾದ ಎಂಟು ಜನ ಖೈದಿಗಳನ್ನು ಎನ್ಕೌಂಟರಿನಲ್ಲಿ ಪೊಲೀಸರು ಹತ್ಯೆ ಮಾಡಿದ ನಂತರ ನವಂಬರಿನಲ್ಲಿ ನೇಮಿಸಲಾಗಿದ್ದ ಏಕ ಸದಸ್ಯ ಸಮಿತಿಗೆ ಇನ್ನೂ ಆರು ತಿಂಗಳ ಅವಧಿ ವಿಸ್ತರಣೆ ಮಾಡಲಾಗಿದೆ. ಅನೇಕ ಹಗರಣಗಳಲ್ಲಿ ಮಧ್ಯಪ್ರದೇಶ ಸರ್ಕಾರ ಆಯೋಗಗಳನ್ನು ರಚಿಸುವುದು ಮತ್ತು ಅವಧಿಯನ್ನು ವಿಸ್ತರಿಸುವ ಪ್ರಕ್ರಿಯೆಯನ್ನು ಗಮನಿಸುತ್ತಿರುವವರಿಗೆ  ಇದು ಚಿಂತೆಗೀಡುಮಾಡುವ ವಿಚಾರವಾಗಿದೆ.

ಮಧ್ಯಪ್ರದೇಶ ಸರ್ಕಾರ ನೇಮಿಸಿದ್ದ ಏಕಸದಸ್ಯ ಸಮಿತಿಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಪಾಂಡೆ ನೇತೃತ್ವ ವಹಿಸಿದ್ದು ಜೈಲಿನಿಂದ ಪರಾರಿಯಾಗಿ ಪೊಲೀಸರ ಗುಂಡಿಗೆ ಬಲಿಯಾದ ಎಂಟು ಜನ ಸಿಮಿ ಕಾರ್ಯಕರ್ತರನ್ನು ಕುರಿತು ತನಿಖೆ ನಡೆಸಬೇಕಿದೆ. ಈ ಎಂಟು ಜನರ ಸಾವಿಗೆ ಪೊಲೀಸರೇ ಹೊಣೆ ಎಂದು ಹಲವು ಸತ್ಯಶೋಧನಾ ಸಮಿತಿಗಳು ವರದಿ ಮಾಡಿವೆ.

ಆದರೆ ಸ್ಥಾಪನೆಯಾದ ದಿನದಿಂದಲೂ ಭಿನ್ನ ಕಾರಣಗಳಿಗಾಗಿ ಸುದ್ದಿಯಲ್ಲಿರುವ  ಆಯೋಗದ ಅಧ್ಯಕ್ಷ ಪಾಂಡೆ ಮತ್ತು ಆರೆಸ್ಸೆಸ್ ನಡುವಿನ ನಿಕಟ ಸಂಬಂಧಗಳು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಮತ್ತೊಂದೆಡೆ  ಆಯೋಗಕ್ಕೆ ಕಾರ್ಯ ನಿರ್ವಹಿಸಲು ಮಧ್ಯಪ್ರದೇಶ ಸರ್ಕಾರ ಒಂದು ಕಚೇರಿ ಒದಗಿಸಲು ಮೂರು ತಿಂಗಳ ಕಾಲ ಬೇಕಾಗಿದೆ. ಇತ್ತೀಚೆಗೆ ತಮ್ಮ ಕರ್ತವ್ಯ ನಿಭಾಯಿಸಲಾರದೆ ಪಾಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಯೂ ಹಬ್ಬಿತ್ತು.

ತಮ್ಮ ವೃತ್ತಿ ಜೀವನದ ಆರಂಭದಿಂದಲೂ ಆರೆಸ್ಸೆಸ್ಸಿನೊಡನೆ ಅವಿನಾಭಾವ ಸಂಬಂಧ ಹೊಂದಿರುವ ಪಾಂಡೆಯನ್ನು ನೇಮಿಸದಿರುವಂತೆ  ಮಾಜಿ ಅಡ್ವೋಕೇಟ್ ಜನರಲ್ ಆನಂದ್ ಮೋಹನ್ ಮಾಥುರ್ ಮುಂತಾದವರು ಆಗ್ರಹಿಸಿದ್ದರು. ಆದರೆ ಆನಂದ್ ಅವರ ಮೇಲೆ ಸಗಣಿ ಎಸೆಯುವ ಮೂಲಕ ಸಂಘಪರಿವಾರದ ಕಾರ್ಯಕರ್ತರು ಭಿನ್ನಾಭಿಪ್ರಾಯಕ್ಕೆ ತಡೆಯೊಡ್ಡಿದ್ದರು.

ಆಯೋಗಕ್ಕೆ ಆಡಳಿತ ವ್ಯವಸ್ಥೆಯ ನೆರವು ನೀಡದಿರುವುದರಿಂದ ತನಿಖೆ ನಿಧಾನವಾಗಿದ್ದು ಮೂರು ತಿಂಗಳು ಕಳೆದರೂ ನ್ಯಾ ಪಾಂಡೆ ಈವರೆಗೂ ಒಮ್ಮೆಯೂ ಕಾರಾಗೃಹಕ್ಕೆ ಭೇಟಿ ನೀಡಿಲ್ಲ. ಈವರೆಗೂ ಆಯೋಗಕ್ಕೆ ಪೊಲೀಸ್ ಇಲಾಖೆಯಿಂದ ಈ ಘಟನೆಯ ಬಗ್ಗೆ 800 ಪುಟಗಳ ವರದಿಯನ್ನು ಸಲ್ಲಿಸಲಾಗಿದ್ದು ಅನೇಕ ಪ್ರಮಾಣಪತ್ರಗಳನ್ನೂ ಸಲ್ಲಿಸಲಾಗಿದೆ.

ಇದೇ ವೇಗದಲ್ಲಿ ಮುಂದುವರೆದರೆ ತನಿಖಾ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು. ಒಂದು ವೇಳೆ ಪಾಂಡೆ ಆಯೋಗ ಅಂತಿಮ ವರದಿಯನ್ನು ಸಲ್ಲಿಸಿದರೂ ಸಹ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅನುಮಾನಾಸ್ಪದವಾಗಿದೆ. ಚೌಹಾಣ್ ಸರ್ಕಾರದ ಆಡಳಿತದಲ್ಲಿ ಈಗಾಗಲೇ ಹಲವಾರು ಆಯೋಗಗಳ ವರದಿಗಳು ಧೂಳು ಹಿಡಿಯುತ್ತಿವೆ.  ಸರ್ದಾರ್ ಸರೋವರ್ ಯೋಜನೆಯ ಹಗರಣಗಳು, ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಹತ್ಯೆ,  2000ದಲ್ಲಿ ನಡೆದ ವಿವಾದಾಸ್ಪದ ಪುರಸಭಾ ಚುನಾವಣೆಗಳಲ್ಲಿ ನಡೆದ ಘಟನೆಗಳು ಇನ್ನೂ ಮುಂತಾದವುಗಳ ತನಿಖೆ ನಡೆಸಲು ನೇಮಿಸಲಾಗಿರುವ ಆಯೋಗಗಳ ವರದಿಗಳು ಬಹಿರಂಗವಾಗಿಯೇ ಇಲ್ಲ.

ಭೂಪಾಲ್ ಎನ್ಕೌಂಟರಿನ ಹತ್ಯೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶಿವರಾಜ್ ಸಿಂಗ್ ಚೌಹಾಣ್ ಕೂಡಲೇ ನ್ಯಾಯಾಂಗ ತನಿಖೆಯನ್ನು ಆದೇಶಿಸಿದ್ದರು. ಆದರೆ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ಪಾಂಡೆ ಆಯೋಗವನ್ನೂ ರಚಿಸಿದ್ದರು.  ಆದರೆ ಆಯೋಗವನ್ನು ರಚಿಸಿದ ನಂತರವೂ ಚೌಹಾಣ್ ಭೂಪಾಲ್ ಕೊಲೆಯನ್ನು ಶ್ಲಾಘಿಸುತ್ತಲೇ ಇರುವುದು ದುರಂತ.