ಮತ್ತೆ ಆಖಾಡದಲ್ಲಿ ದತ್

ಸಂಜಯ್ ದತ್ ಜೈಲು ವಾಸದ ನಂತರ ಮೊದಲ ಬಾರಿಗೆ ತೆರೆಯ ಮೇಲೆ ಬರುತ್ತಿದ್ದಾರೆ. ದತ್ ಅಭಿನಯಿಸಿದ `ಭೂಮಿ’ ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದು ಸಂಜು ಬಾಬಾ ಈಗ ಮತ್ತೆ ಆಖಾಡಕ್ಕೆ ಇಳಿದಿದ್ದಾರೆ.

`ಭೂಮಿ’ ಚಿತ್ರದಲ್ಲಿ ಸಂಜಯ್ ದತ್ ಅದಿತಿ ರಾವ್ ಹೈದರಿಯ ತಂದೆಯಾಗಿ ನಟಿಸಿದ್ದಾರೆ. ಇದೊಂದು ತಂದೆ-ಮಗಳ ಭಾವನಾತ್ಮಕ ಸಂಬಂಧ ಎತ್ತಿ ತೋರಿಸುವ ಚಿತ್ರವಾಗಿದೆ. ಈ ಸಿನಿಮಾದ ಟ್ರೈಲರನ್ನು ದತ್ ತಮ್ಮ ಮೊದಲ ಪತ್ನಿಯಿಂದ ಜನಿಸಿದ ಮಗಳು ತ್ರಿಷಾಲಾ ಹುಟ್ಟುಹಬ್ಬದ ದಿನವೇ ಬಿಡುಗಡೆ ಮಾಡಿದ್ದು ಇನ್ನೊಂದು ವಿಶೇಷ.

ಗೂಂಡಾಗಳ ಕೈಯಲ್ಲಿ ನಲುಗಿ ಹೋದರೂ ಅದರ ವಿರುದ್ಧ ಸಿಡಿದೇಳುವ ಮಗಳ ಪಾತ್ರದಲ್ಲಿ ಮೊದಲ ಬಾರಿಗೆ ಅದಿತಿ ಪವರ್ಫುಲ್ ಪರ್ಫಾರ್ಮೆನ್ಸ್ ನೀಡಿದ್ದಾಳೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಬಸವಳಿಯುವ ಮಗಳ ರಕ್ಷಣೆಗೆ ಧಾವಿಸುವ ಅಪ್ಪ, ಕೊನೆಗೆ ನ್ಯಾಯ ಸಿಗದಾಗ ಸೇಡು ತೀರಿಸಿಕೊಳ್ಳಲು ಬಯಸುವ ತಂದೆಯಾಗಿ ಸಂಜಯ್ ದತ್ ನಟನೆ ನಿರೀಕ್ಷೆಯಂತೆಯೇ ಗಮನಸೆಳೆದಿದೆ.

ಶರತ್ ಕೆಲ್ಕಾರ್ ಚಿತ್ರದಲ್ಲಿ ವಿಲನ್. ಈ ಸಿನಿಮಾವನ್ನು `ಮೇರಿ ಕಾಮ್’, `ಸರಬ್ಜಿತ್’ ಖ್ಯಾತಿಯ ಓಮಂಗ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರ ಸೆಪ್ಟೆಂಬರ್ 22ಕ್ಕೆ ತೆರೆಕಾಣಲಿದೆ.