ದಲಿತರ ಮತ ಸೆಳೆಯಲು ಮೋದಿಯ ಭೀಮ್ ಆ್ಯಪ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ನೆಪದಲ್ಲಿ ಭೀಮ್ ಆ್ಯಪ್ ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್ ಮೂಲಕ ಬಿ ಆರ್ ಅಂಬೇಡ್ಕರ್ ಹೆಸರಿನಲ್ಲಿ ಸರಳವಾಗಿ ಜನರು ಹಣ ಪಡೆಯಬಹುದು ಮತ್ತು ಪಾವತಿಸಬಹುದು ಎಂದು ತಿಳಿಸಿದ್ದಾರೆ.

ಮುಂಬರುವ ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ದಲಿತರ ಮತಗಳನ್ನು ಸೆಳೆಯಲು ಈ ತಂತ್ರವನ್ನು ಮೋದಿ ಅನುಸರಿಸುತ್ತಿದ್ದಾರೆ ಅನ್ನಿಸುತ್ತದೆ. ಇಂತಹ ಯೋಜನೆಗಳಿಗೆ ರಾಷ್ಟ್ರ ನಾಯಕರ ಹೆಸರಿಡುವುದರಿಂದ ದಲಿತರ ಉದ್ಧಾರ ಆಗುವುದಿಲ್ಲ. ಬದಲಾಗಿ ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

ಇತ್ತೀಚೆಗೆ ಜಾಗತೀಕರಣದ ಪ್ರಭಾವದಿಂದ ದಲಿತರು ನಿರುದ್ಯೋಗಿಗಳಾಗುತ್ತಿರುವುದರಿಂದ (ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು) ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕಲ್ಪಿಸಿದರೆ ಅವರ ಬದುಕಾದರೂ ಹಸನಾದೀತು. ದಲಿತರು ಇಂದು ಪ್ರಜ್ಞಾವಂತರಾಗಿದ್ದಾರೆ. ಅವರನ್ನು ಸುಲಭವಾಗಿ ಮೋಸಗೊಳಿಸುವುದು ಕಷ್ಟ. ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ 35 ಕೋಟಿ. ಆಂಗ್ಲ ಭಾಷೆ ಗೊತ್ತಿರದ ಜನಸಂಖ್ಯೆ ಶೇಕಡ 89, ಅಲ್ಲದೆ ದೇಶದಲ್ಲಿ ಅನಕ್ಷರಸ್ಥರು ಭಾರೀ ಪ್ರಮಾಣದಲ್ಲಿ ಇರುವಾಗ ಅದೆಷ್ಟು ಜನರಿಗೆ ಸ್ಮಾರ್ಟ್‍ಫೋನ್ ಬಳಕೆ ಗೊತ್ತಿರುತ್ತದೆ ? ಅಂಬೇಡ್ಕರ್ ಹೆಸರನ್ನು ಬಳಸಿದರೆ ಬಹುಶಃ ವಿರೋಧಗಳು ಕಡಿಮೆ ಆಗಬಹುದೆಂಬ ದುರಾಲೋಚನೆ ಸರಕಾರಕ್ಕೆ ಇರಬಹುದು ಅನಿಸುತ್ತದೆ.

  • ಈರಪ್ಪ ಮೇಸ್ತ್ರೀ, ಅಂಬಲಪಾಡಿ-ಉಡುಪಿ