ಕರಾವಳಿಯಲ್ಲಿ ಮಹಾಮಾರಿ ಹಂದಿಜ್ವರ

ಭಟ್ಕಳ ಮಹಿಳೆ ಬಲಿ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಹಂದಿ(ಹೆಚ್ 1 ಎನ್ 1)ಜ್ವರದ ಮಹಾಮಾರಿಗೆ ತಾಲೂಕಿನ ಕರಿಕಲಿನ ವಿವಾಹಿತ ಮಹಿಳೆಯೊಬ್ಬಳು ಮಣಿಪಾಲದ ಆಸ್ಪತ್ರೆಯಲ್ಲಿ ರವಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ತಿಂಗಳ ಹಿಂದಷ್ಟೇ ಅಳ್ವೆಕೋಡಿಯ ಬಾಲಕಿಯೊಬ್ಬಳು ಹಂದಿಜ್ವರದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಕರಿಕಲ್ ನಿವಾಸಿ ನಾಗರತ್ನಾ ಶನಿಯಾರ ಮೊಗೇರ (40) ಎಂಬಾಕೆ ಇದೇ ಜ್ವರಕ್ಕೆ ಮೃತಪಟ್ಟಿದ್ದಾರೆ. ಈಕೆ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಜ್ವರ ತೀವ್ರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಈಕೆಯನ್ನು ಕಳೆದ ಮೂರು ದಿನಗಳ ಹಿಂದೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆಗೆ ಹಂದಿಜ್ವರ ಎನ್ನುವುದರ ಬಗ್ಗೆ ಖಚಿತಪಡಿಸಿಕೊಂಡ ಮಣಿಪಾಲದ ವೈದ್ಯರು ಸೂಕ್ತ ಚಿಕಿತ್ಸೆ ಕೂಡ ಆರಂಭಿಸಿದ್ದರು. ಆದರೆ ರವಿವಾರ ಈಕೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ವಿಪರ್ಯಾಸವೆಂದರೆ ಮಹಿಳೆ ಹಂದಿಜ್ವರಕ್ಕೆ ಬಲಿಯಾಗಿರುವುದು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲವಾಗಿದೆ. ಅಧಿಕಾರಿಗಳು ದೃಢೀಕೃತ ಮಾಹಿತಿ ಮಣಿಪಾಲ ಆಸ್ಪತ್ರೆಯಿಂದ ಇನ್ನೂ ತಮಗೆ ಲಭಿಸಿಲ್ಲ ಎಂದು ತಿಳಿಸಿದ್ದಾರೆ.


ಉಪ್ಪೂರಿನಲ್ಲೂ ಮಹಿಳೆ ಮೃತ

ಉಡುಪಿ : ಶಂಕಿತ ಹಂದಿಜ್ವರ ಸೋಂಕಿಗೆ ಬಲಿಯಾಗಿ ಉಪ್ಪೂರು ಕೆ ಜಿ ರೋಡಿನ 38ರ ಹರೆಯದ ಮಹಿಳೆ ಸಾವನ್ನಪ್ಪಿದ್ದಾರೆ.

ಒಂದು ತಿಂಗಳಿನಿಂದ ಇವರು ಜ್ವರದಿಂದ ಬಳಲುತ್ತಿದ್ದು, ಐದು ದಿನಗಳ ಹಿಂದೆ ಇವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇವರು ಸಾವನ್ನಪ್ಪಿದ್ದಾರೆ. ಇವರ ಪತಿ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು, ಒಂದು ಪುಟ್ಟ ಮಗುವೂ ಇವರಿಗಿದೆ ಎಂದು ತಿಳಿದುಬಂದಿದೆ. ಮೃತ ಮಹಿಳೆ