ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ

ಭಟ್ಕಳ ಪುರಸಭೆ ಮುಖ್ಯಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದರು

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಾರ್ಯಾಚರಣೆ ಭಟ್ಕಳದಿಂದಲೇ ಆರಂಭಗೊಂಡಿದ್ದು, ಬುಧವಾರ ಸಂಜೆ ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ನಾಲ್ಕು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗಲೇ ಭ್ರಷ್ಟಾಚಾರ ನಿಗ್ರಹ ದಳದವರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಆರಂಭಗೊಂಡ ಬಳಿಕ ಪ್ರಥಮ ಪ್ರಕರಣ ಇದಾಗಿದೆ. ಇಲ್ಲಿನ ಪುರಸಭೆ ವ್ಯಾಪ್ತಿಯ ನವಾಯತ್ ಕಾಲೊನಿಯ ತಂಝೀಂ ರಸ್ತೆಯ ವ್ಯಕ್ತಿಯೊಬ್ಬರ ಕಟ್ಟಡಕ್ಕೆ ನಳ್ಳಿ ನೀರು ಒದಗಿಸುವ ಕುರಿತು ಡಿಸೆಂಬರ್ 22ರಂದು ಪುರಸಭೆಗೆ ಅರ್ಜಿ ಸಲ್ಲಿಸಲಾಗಿತ್ತು. ಡಿಸೆಂಬರ್ 23ರಂದು ಅರ್ಜಿದಾರರು ಪುರಸಭೆ ಮುಖ್ಯಾಧಿಕಾರಿ ರಮೇಶ ಎಂ ಜಿ ಅವರನ್ನು ಭೇಟಿಯಾದಾಗ ಅವರು ಹೊಸ ನಳ್ಳಿ ನೀರು ಜೋಡಣೆಗಾಗಿ 4 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಬುಧವಾರ ಬೆಳಿಗ್ಗೆ ಕಾರವಾರದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಅರ್ಜಿದಾರರು ದೂರು ನೀಡಿದ್ದರು. ಸಂಜೆ ಭಟ್ಕಳಕ್ಕಾಗಮಿಸಿದ ಭ್ರಷ್ಟಾಚಾರ ನಿಗ್ರಹ ದಳದ ತಂಡ ಪುರಸಭೆ ಮುಖ್ಯಾಧಿಕಾರಿ 2 ಸಾವಿರದ ಎರಡು ನೋಟುಗಳನ್ನು ಸ್ವೀಕರಿಸುತ್ತಿರುವಾಗಲೇ ರೆಡ್ ಹ್ಯಾಂಡಾಗಿ ಹಿಡಿದು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಖ್ಯಾಧಿಕಾರಿಯನ್ನು ಬುಧವಾರ ರಾತ್ರಿಯೇ ಕಾರವಾರದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟ ಮನೆ ಮಾಲಿಕರು ದೂರು ನೀಡದೇ ಇನ್ನೊಬ್ಬ ವ್ಯಕ್ತಿ ಮುಖ್ಯಾಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ಕಳೆದ ಆರು ತಿಂಗಳಿನಿಂದ ರಮೇಶ ತುಮಕೂರಿನಿಂದ ಭಟ್ಕಳಕ್ಕೆ ವರ್ಗಾವಣೆಗೊಂಡು ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬುಧವಾರ ಸಂಜೆ ಪುರಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಕೊಠಡಿಯಲ್ಲಿ ಇದ್ದರೂ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವುದು ಮೊದಲು ಗೊತ್ತಾಗಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಇವರಿಗೆ ವಿಷಯ ಗೊತ್ತಾಗಿತ್ತು. ಭಟ್ಕಳದಲ್ಲಿ ಎಸಿಬಿ ದಿಢೀರ್ ದಾಳಿಯಿಂದ ಅಧಿಕಾರಿಗಳಿಗೆ ನಡುಕ ಉಂಟಾಗಿದೆ.