ಹೋಟೆಲ್ ನಿರ್ವಹಣೆಗೆ ರಾಜೇಶ್ವರಿ ಜಿಪಿಎ ರದ್ದು ಕೋರಿ ಭಾಸ್ಕರ ಶೆಟ್ಟಿ ತಾಯಿ ಕೋರ್ಟಿಗೆ ಅರ್ಜಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : “ಯಾವುದೇ ವ್ಯಕ್ತಿಗಳು ಕಸ್ಟಡಿಯಲ್ಲಿರುವ ಸಂದರ್ಭದಲ್ಲಿ ಕೋರ್ಟ್ ಆದೇಶವಿಲ್ಲದೇ ಯಾವುದೇ ವ್ಯವಹಾರವನ್ನು ನಡೆಸುವಂತಿಲ್ಲ. ಆದರೆ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿಯು ಜೈಲಿನಿಂದಲೇ ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ)ಯನ್ನು ತನ್ನ ತಾಯಿ ಸುಮತಿ ಶೆಟ್ಟಿಯವರಿಗೆ ನೀಡಿದ್ದಾರೆ. ಈ ಜಿಪಿಎಯನ್ನು ಕೂಡಲೇ ರದ್ದು ಪಡಿಸಬೇಕು” ಎಂದು ಕೋರಿ ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ ಖಾಸಗಿ ವಕೀಲರ ಮೂಲಕ ಸಿಜೆಎಂ ಕೋರ್ಟಿಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.

ರಾಜೇಶ್ವರಿ ಜೈಲಿನಲ್ಲಿರುವಾಗಲೇ ತಾಯಿಗೆ ಜಿಪಿಎ ಹೇಗೆ ಹಸ್ತಾಂತರಿಸಿದರು ಎಂದು ಪ್ರಶ್ನಿಸಲಾಗಿದ್ದು, ಈ ವಿಷಯವನ್ನೇ ಆಧಾರವನ್ನಾಗಿಟ್ಟುಕೊಂಡು ಅರ್ಜಿ ಸಲ್ಲಿಸಲಾಗಿದೆ ಎಂದು ಗುಲಾಬಿ ಶೆಟ್ಟಿ ಅವರ ಕುಟುಂಬಿಕರು ಮಾಹಿತಿ ನೀಡಿದ್ದಾರೆ.

ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಸಂಬಂಧ ಆರೋಪಿ ಪತ್ನಿ ರಾಜೇಶ್ವರಿ ಶೆಟ್ಟಿ (50), ನವನೀತ ಶೆಟ್ಟಿ (20), ನಿರಂಜನ ಭಟ್ಟ ಹಾಗೂ ಸಾಕ್ಷ್ಯ ನಾಶದ ಆರೋಪಿಗಳಾದ ಶ್ರೀನಿವಾಸ ಭಟ್ ಮತ್ತು ರಾಘು ಬುಧವಾರ ಉಡುಪಿಯ ಹೆಚ್ಚುವರಿ ಸಿವಿಲ್ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಗೈರು ಹಾಜರಾಗಿ ವಾರಂಟ್ ಪಡೆದುಕೊಂಡಿದ್ದ ಶ್ರೀನಿವಾಸ ಭಟ್ ಮತ್ತು ರಾಘು ಈ ಬಾರಿ ನ್ಯಾಯಾಲಯಕ್ಕೆ ಹಾಜರಾಗಿ ಗೈರಿಗೆ ಸೂಕ್ತ ಉತ್ತರವನ್ನು ನೀಡಿದರು. ರಾಜೇಶ್ವರಿ ಶೆಟ್ಟಿ ಜಾಮೀನು ಅರ್ಜಿ ವಿಚಾರಣೆ ಡಿ 6ಕ್ಕೆ ಮುಂದೂಡಿಕೆಯಾಗಿದೆ.