ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳು ಶಿವಮೊಗ್ಗ ಜೈಲಿಗೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅನಿವಾಸಿ ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ್ ಭಟ್ಟನನ್ನು ಇದೀಗ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಸೆಪ್ಟೆಂಬರ್ 11ರಂದು ಮಂಗಳೂರು ಜೈಲಿನೊಳಗೆ ಆರೋಪಿಗಳಾದ ನವನೀತ್ ಮತ್ತು ನಿರಂಜನ್ ಮೇಲೆ ತಂಡವೊಂದು ಹಲ್ಲೆ ನಡೆಸಿತ್ತು. ಗಾಯಗೊಂಡಿದ್ದ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ವಾಪಾಸ್ ಜೈಲಿಗೆ ಕರೆತರಲಾಗಿತ್ತು.

ಬಜಿಲಕೇರಿ ಧನರಾಜ್, ಲಾಯ್ ವೇಗಾಸ್ ಸೇರಿದಂತೆ ಸುಮಾರು 18 ಮಂದಿಯ ತಂಡ ಇವರಿಬ್ಬರ ಮೇಲೆ ಹಲ್ಲೆ ನಡೆಸಿತ್ತು. ದೊಡ್ಡ ಮೊತ್ತದ ಹಫ್ತಾ ಹಣ ನೀಡುವಂತೆ ಆಗ್ರಹಿಸಿದಾಗ, ಇದಕ್ಕೆ ನಿರಾಕರಿಸಿದ ನವನೀತ್ ಮೇಲೆ ತಂಡ ಹಲ್ಲೆ ನಡೆಸಿತ್ತು. ಈ ಬಗ್ಗೆ ಬರ್ಕೆ ಪೊಲೀಸರು ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದ್ದರು.

ಈ ಆರೋಪಿಗಳು ಇದೇ ಜೈಲಿನಲ್ಲಿದ್ದರೆ ಮತ್ತೆ ಇವರ ಮೇಲೆ ಹಲ್ಲೆಗಳಾಗುವ ಸಾಧ್ಯತೆ ಇರುವುದನ್ನು ಮನಗಂಡ ಪೊಲೀಸರು ಈ ಮೂವರನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.

2016 ಜುಲೈಯಲ್ಲಿ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಕೊಲೆ ನಡೆದಿತ್ತು. ಹೋಮಕುಂಡದಲ್ಲಿ ದೇಹಸುಟ್ಟ ಪ್ರಕರಣ ಭಾರೀ ಸುದ್ದಿ ಮಾಡಿತ್ತು.

ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಮತ್ತು ಜ್ಯೋತಿಷಿ ನಿರಂಜನ ಭಟ್ ಈ ಪ್ರಕರಣದ ಪ್ರಮುಖ ಆರೊಪಿಗಳಾಗಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಆರೋಪಿಗಳನ್ನು ಮಂಗಳೂರು ಕಾರಾಗೃಹದಲ್ಲಿ ಇರಿಸಲಾಗಿತ್ತು. ತಮಗೆ ಜಾಮೀನು ನೀಡುವಂತೆ ಕೋರಿ ಇದೀಗ ರಾಜೇಶ್ವರಿ ಶೆಟ್ಟಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರೂ ಅಲ್ಲೂ ಇವರಿಗೆ ಜಾಮೀನು ಸಿಕ್ಕಿಲ್ಲ.