ಉಡುಪಿ ಉದ್ಯಮಿ ಭಾಸ್ಕರ್ ಕೊಲೆ ಆರೋಪಿ ನವನೀತ್, ನಿರಂಜನ್ ಭಟ್ಟಗೆ ಜೈಲಿನಲ್ಲಿ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅನಿವಾಸಿ ಉದ್ಯಮಿ ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಮೇಲೆ ಮಂಗಳೂರು ಜೈಲಿನಲ್ಲಿ ಹಲ್ಲೆ ನಡೆದಿದೆ. ಗಂಭೀರ ಗಾಯಗೊಂಡ ಇವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮತ್ತೆ ಜೈಲಿಗೆ ದಾಖಲಿಸಲಾಯಿತು.

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ, ಶೆಟ್ಟಿ ಪುತ್ರ ನವನೀತ್ ಶೆಟ್ಟಿ ಹಾಗೂ ಸ್ವಘೋಷಿತ ಜ್ಯೋತಿಷಿ ನಿರಂಜನ್ ಭಟ್ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ. ಸೋಮವಾರ ಮಧ್ಯಾಹ್ನ ಏಕಾಏಕಿ ನವನೀತ್ ಶೆಟ್ಟಿ ಹಾಗೂ ನಿರಂಜನ ಭಟ್ ಎದುರು ಬಂದ ಧನರಾಜ್ ಮತ್ತು ತಂಡ ನೀರಿನ ಡ್ರಮ್ಮಿನಿಂದ ಹಲ್ಲೆ ನಡೆಸಿದ್ದಾರೆ.

ತಂಡದ ಹಲ್ಲೆಯಿಂದಾಗಿ ನಿರಂಜನ್ ಭಟ್ ಹಾಗೂ ನವನೀತ್ ಶೆಟ್ಟಿ ಅವರಿಗೆ ಗಾಯಗಳಾಗಿದೆ ಎನ್ನಲಾಗಿದೆ. ಹಲ್ಲೆ ನಡೆದ ವಿಷಯ ತಿಳಿಯುತ್ತಿದ್ದಂತೆ ಮಂಗಳೂರು ಕಾರಾಗೃಹಕ್ಕೆ ಹಿರಿಯ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದರು.

ನಿರಂಜನ್ ಭಟ್ ಹಾಗೂ ನವನೀತ್ ಶೆಟ್ಟಿಯ ಮೇಲೆ ನಡೆದ ಹಲ್ಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ನವನೀತ್, ನಿರಂಜನನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಆಸ್ಪತ್ರೆಯ ವಠಾರದಲ್ಲಿ ಬಹಳಷ್ಟು ಜನ ಕುತೂಹಲಿಗಳು ಸೇರಿದ್ದರು.

2016 ಜುಲೈಯಲ್ಲಿ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಕೊಲೆ ನಡೆದಿತ್ತು. ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ನಿರಂಜನ ಭಟ್ ಈ ಪ್ರಕರಣದ ಪ್ರಮುಖ ಆರೊಪಿಗಳಾಗಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳನ್ನು ಮಂಗಳೂರು ಕಾರಾಗೃಹದಲ್ಲಿ ಇರಿಸಲಾಗಿದೆ.ನವನೀತ್ ಮತ್ತು ನಿರಂಜನ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಲಾಯ್ ವೇಗಾಸ್, ಕಿಶನ್, ಧನರಾಜ್, ವಿಕ್ಕಿ, ಅಕ್ಷಯ್, ಶಿವು, ಸ್ವರಾಜ್, ಅಭಿಷೇಕ್, ರಾಜೇಶ್, ಗೌರವ್, ಗೌತಮ್, ಪುಷ್ಪರಾಜ್, ಬಾಲಕೃಷ್ಣ, ಅವಿನಾಶ್, ಶಂಕರ್ ಗಟ್ಟಿ, ಮುಕ್ಕೇರ್, ಮಿಥು ಪೂಜಾರಿ ಮತ್ತು ಸಾಗರ್ ಪೂಜಾರಿ ಎಂದು ಗುರುತಿಸಲಾಗಿದೆ. ಇವರೆಲ್ಲರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆಯಿಂದಾಗಿ ನವನೀತನ ಕಿವಿ ಮತ್ತು ಕೈಗೆ ಗಾಯಗಳಾಗಿದ್ದು, ನಿರಂಜನ್ ಭಟ್ಟಗೆ ಗುದ್ದಿದ ಗಾಯವಾಗಿದೆ.ನಿರಂಜನ್, ನವನೀತಗೆ ಹಲ್ಲೆ ನಡೆಸಿದ ಆರೋಪಿಗಳು ತಮಗೆ 5 ಲಕ್ಷ ರೂ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬರ್ಕೆ ಠಾಣಾ ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಜೈಲಿನ ಸೂಪರಿಂಟೆಂಡೆಂಟ್ ವಿಜಯ್ ರೋಡ್ಕರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.