ಕಾಲೇಜು ಉಪನ್ಯಾಸದಲ್ಲಿ ವಿಡಿಯೋ ಬಳಸಲು ಭರತಲಾಲ್ ಮೀನಾ ಸಲಹೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಡಿಯೋ ರೆಕಾರ್ಡ್ ಆಧರಿತ ಅಧ್ಯಯನದಿಂದ ಉಪನ್ಯಾಸಕರು ತಜ್ಞರ ಅಂಕಿಅಂಶಗಳ ಆಧಾರದಲ್ಲಿ ಪಾಠ ಪ್ರವಚನಗಳನ್ನು ನೀಡುವುದು ಹೆಚ್ಚು ಉಪಯುಕ್ತ ಎಂದು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಭರತ್‍ಲಾಲ್ ಮೀನಾ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಉನ್ನತ ಅಧ್ಯಯನಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯ ಎಂದಿದ್ದಾರೆ.

ಮಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

“ಉಪನ್ಯಾಸವನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಬೇಕಾದರೆ ವಿಮರ್ಶೆಗಳು ಪೂರಕ. ಜೊತೆಗೆ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಅಧ್ಯಯನ ಮಾಡಬೇಕು. ಈ ಮೂಲಕ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಉಪನ್ಯಾಸಕರು ಫೀಡ್‍ಬ್ಯಾಕ್ ಪಡೆದುಕೊಳ್ಳಲು ಸಾಧ್ಯವಿದೆ. ಜೊತೆಗೆ ಪಠ್ಯವಿಚಾರಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಪರಿಣಾಮಕಾರಿಯಾದ ಬೋಧನೆ ಮಾಡಲು ಸಾಧ್ಯವಿದೆ”  ಎಂದು ಭರತ್‍ಲಾಲ್ ಮೀನಾ ಅಭಿಪ್ರಾಯಪಟ್ಟರು.

“ಭವಿಷ್ಯದಲ್ಲಿ ಎಲ್ಲರೂ ಮಾಹಿತಿ ತಂತ್ರಜ್ಞಾನ ಆಧಾರಿತವಾಗಿ ಕೆಲಸ ಮಾಡಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ ನಾವು ಈಗಿಂದೀಗಲೇ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿದೆ. ಅದರಲ್ಲೂ ಶಿಕ್ಷಕರು, ಉಪನ್ಯಾಸಕರು ಮಾಹಿತಿ ತಂತ್ರಜ್ಞಾನವನ್ನು ತಮ್ಮ ವೃತ್ತಿ ಬದುಕಿಗೆ ಅಳವಡಿಸಿಕೊಂಡಲ್ಲಿ ಅದು ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯವಾಗಬಹುದು” ಎಂದರು. ವಿದ್ಯಾರ್ಥಿಗಳನ್ನು ಮಾಹಿತಿ ತಂತ್ರಜ್ಞಾನದ ಯುಗಕ್ಕೆ ಸಿದ್ಧಪಡಿಸಿ ಎಂದರು.

“ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಬೆಳೆಯಲು ಕೇವಲ ಡಿಗ್ರಿ ಪಡೆಯುವುದೊಂದೇ ಮಾನದಂಡವಾಗಲಾರದು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಅಟೆಂಡೆಂಟ್ಸ್ ದಾಖಲಿಸಲು ಸ್ಮಾರ್ಟ್ ಪೋನ್‍ಗಳನ್ನು ಬಳಸಿಕೊಳ್ಳಬೇಕು” ಎಂದರು.