ಬ್ರಹ್ಮಾವರ ತಾಲೂಕು ರಚನೆಗೆ ಒತ್ತಾಯಿಸಿ ಭಜನೆ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಬ್ರಹ್ಮಾವರ ತಾಲೂಕು ರಚನೆ ಕನಸಾಗಿಯೇ ಉಳಿದ್ದಿದ್ದು, ಕೂಡಲೇ ಬ್ರಹ್ಮಾವರ ತಾಲೂಕು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಭಜನೆ ಮಾಡುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ಮಾಡಲಾಯಿತು.

ಜನಪ್ರತಿನಿಧಿಗಳಿಗೆ ತಾಲೂಕು ರಚನೆ ಮಾಡಲು ಸದ್ಬುದ್ಧಿ ನೀಡು ದೇವರೇ ಎಂದು ಕೋರಿ ದೇವರಿಗೆ ಭಜನೆ ಮೂಲಕ ಪೂಜೆ ಸಲ್ಲಿಸಲಾಯಿತು. ಈ ಹಿಂದಿನ ಬಿಜೆಪಿ ಸರಕಾರ ಘೋಷಿಸಿದ್ದ ಬ್ರಹ್ಮಾವರ ತಾಲೂಕು ರಚನೆಯನ್ನು ಇದೀಗ ಕಾಂಗ್ರೆಸ್ ಸರಕಾರ ಕಾರ್ಯರೂಪಕ್ಕೆ ತಾರದಿರುವ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕು ರಚನಾ ಹೋರಾಟ ಸಮಿತಿ ಮಾಜಿ ಮತ್ತು ಹಾಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗದಲ್ಲಿ ಭಜನೆ ಮಾಡಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಉಡುಪಿಯ ತಾಲೂಕು ಪಂಚಾಯತಿ ಕಚೇರಿಯಲ್ಲಿರುವ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಹಾಲಿ ಸಚಿವ ಪ್ರಮೋದ್ ಮಧ್ವರಾಜ್ ಕಚೇರಿ ಮುಂದೆ ಹೋರಾಟಗಾರರು ಕೇಸರಿ ಧೋತಿ, ಕೇಸರಿ ಶಾಲು ತೊಟ್ಟು, ಕೈಯಲ್ಲಿ ತಾಳ, ತಮಟೆ ಹಿಡಿದುಕೊಂಡು ದೇವರ ಭಜನೆಗಳನ್ನು ಹಾಡಿದರು. ಬ್ರಹ್ಮಾವರವನ್ನು ತಾಲೂಕು ಮಾಡಿ ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಜೊತೆಗೆ ಸೇರಿದ ಮಟಪಾಡಿ ಚಂಡಿಕಾ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರು ಕೂಡಾ ಸಾಥ್ ನೀಡಿ ಭಜನೆಯಲ್ಲಿ ಪಾಲ್ಗೊಂಡರು.

ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2013ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡ್ಡಿಯೂರಪ್ಪ ಅವರು ಬಜೆಟ್ಟಿನಲ್ಲಿ ಬ್ರಹ್ಮಾವರವನ್ನು ತಾಲೂಕನ್ನಾಗಿ ಘೋಷಿಸಿ, ಹಣವನ್ನೂ ಮೀಸಲಿಟ್ಟಿದ್ದರು. ಆದರೆ ಇದುವರೆಗೆ ಈ ಘೋಷಣೆ ಅನುಮೋದನೆಗೊಂಡಿಲ್ಲ. ಅನುದಾನವೂ ಬಿಡುಗಡೆ ಆಗಿಲ್ಲ. ಹಲವು ವರ್ಷಗಳಿಂದ ತಾಲೂಕು ಕೇಂದ್ರ ಕಚೇರಿಗಳ ನಿರ್ಮಾಣಕಕ್ಕೆ ಜಮೀನನ್ನೂ ಕೂಡಾ ಕಾಯ್ದಿರಿಸಲಾಗಿದೆ. ತಾಲೂಕು ಆಗುವ ಎಲ್ಲಾ ಅರ್ಹತೆಗಳನ್ನೂ ಬ್ರಹ್ಮಾವರ ಹೊಂದಿದೆ. ಆದರೆ ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರು ಪ್ರಯತ್ನ ಮಾಡಿದ್ದರೆ ಬ್ರಹ್ಮಾವರ ಎಂದೋ ತಾಲೂಕು ಆಗುತ್ತಿತ್ತು ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.