ಸಾಲಮನ್ನಾಕ್ಕಾಗಿ ಭಾಗ್ಯಗಳಿಗೆ ಕತ್ತರಿ ?

ಎರಡು ಸತತ ಬರದಿಂದ ತತ್ತರಿಸಿದ ರೈತರಿಗೆ ರೂ 50,000ರವರೆಗೆ ಸಾಲಮನ್ನಾ ಭರವಸೆ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಹಣಕಾಸು ಒತ್ತಡವನ್ನು ನಿಭಾಯಿಸಲು ಜನಪ್ರಿಯ ಯೋಜನೆಗಳಿಗೆ ಅನುದಾನ ಕಡಿತ ಮಾಡಲು ಪರಿಶೀಲಿಸುತ್ತಿದೆ.

ಅನ್ನಭಾಗ್ಯದಿಂದ ಶಾದಿ ಭಾಗ್ಯದವರೆಗೆ ಕರ್ನಾಟಕ ಸರ್ಕಾರದ ಜನಪ್ರಿಯ ಯೋಜನೆಗಳು ಈಗಾಗಲೇ ಬೊಕ್ಕಸಕ್ಕೆ ಹೊರೆಯಾಗಿದ್ದು, ರೂ 8,165 ಕೋಟಿಯಷ್ಟು ರೈತ ಸಾಲ ಮರುಪಾವತಿಗೆ ಹೊರೆಗಾಗಿ ಇವುಗಳಿಗೆ ಕತ್ತರಿ ಹಾಕಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 2017-18ರ ಅಂತ್ಯದಲ್ಲಿ ರೂ 2,42,420 ಕೋಟಿಯಷ್ಟು ಭಾಗ್ಯ ಯೋಜನೆ ಹೊರೆ ಸರ್ಕಾರದ ಮುಂದಿದೆ. ಅದರಲ್ಲಿ ರೂ 1 ಲಕ್ಷ ಕೋಟಿಯನ್ನು ಈಗಾಗಲೇ ವಿತರಿಸಲಾಗಿದೆ. ಹೀಗಾಗಿ ರೂ 8,165 ಕೋಟಿ ಹೊರೆಯನ್ನು ಹೊತ್ತುಕೊಳ್ಳುವ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿಲ್ಲ. ರಾಜ್ಯದ ಸಹಕಾರಿ ಬ್ಯಾಂಕುಗಳಿಗೆ ಮರುಪಾವತಿ ಮಾಡಲು ರೂ 8,165 ಕೋಟಿಯನ್ನು ನಿಭಾಯಿಸಲು ಸರ್ಕಾರ ಜನಪ್ರಿಯ ಯೋಜನೆಗಳಿಗೆ ಕತ್ತರಿ ಹಾಕಬೇಕಿದೆ.

“ಈಗಿನ ಯೋಜನೆಗಳನ್ನು ಸ್ವಲ್ಪ ಮಿತಿಗೊಳಿಸಬೇಕು ಮತ್ತು ರೈತ ಸಾಲವನ್ನು ಮರುಪಾವತಿಸಲು ದಾರಿ ಹುಡುಕಬೇಕು” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಐ ಎಸ್ ಎನ್ ಪ್ರಸಾದ್ ಹೇಳಿದ್ದಾರೆ.

ಪಂಜಾಬ್ ಮತ್ತು ಉತ್ತರಪ್ರದೇಶಗಳು ರೂ 10,000 ಕೋಟಿ ಮತ್ತು ರೂ 36,000 ಕೋಟಿ ರೈತ ಸಾಲ ಮನ್ನಾ ಘೋಷಿಸಿರುವ ನಿರ್ಧಾರಗಳಂತಲ್ಲದೆ, ಕರ್ನಾಟಕದ ಸರ್ಕಾರದ ಪ್ರತೀ ರೈತನಿಗೆ ರೂ 50,000 ಎಂಬ ಘೋಷಣೆ ಹೆಚ್ಚು ವಿವೇಕಯುತ ಮತ್ತು ವಿವೇಚನಾ ನಡೆ ಎಂದು ಅವರು ಹೇಳುತ್ತಾರೆ. “ದೊಡ್ಡ ಮೊತ್ತದ ಸಾಲ ಮನ್ನಾವನ್ನು ಇತರ ರಾಜ್ಯಗಳು ಹೇಗೆ ನಿಭಾಯಿಸುತ್ತವೆ ಎಂದು ತಿಳಿದಿಲ್ಲ. ಆದರೆ ರೂ 1.86 ಲಕ್ಷ ಕೋಟಿ ಬಜೆಟ್ ವೆಚ್ಚದಲ್ಲಿ ರೂ 8000 ಕೋಟಿಗಳಷ್ಟನ್ನು ನಿಭಾಯಿಸುವುದು ಕಷ್ಟವಾಗದು” ಎಂದು ಪ್ರಸಾದ್ ಹೇಳಿದ್ದಾರೆ.

ಈ ನಡುವೆ ಹಣಕಾಸಿನ ಸಮರ್ಥ ನಿರ್ವಹಣೆಗೆ ಸಾಲ ಮನ್ನಾವನ್ನು ಎರಡು ವಿತ್ತೀಯ ವರ್ಷಗಳಿಗೆ ವಿಭಜಿಸಲು ಸರ್ಕಾರ ಪರಿಶೀಲಿಸುತ್ತದೆ. ಈ ವಿತ್ತೀಯ ವರ್ಷದಲ್ಲಿ ರೂ 4000 ಕೋಟಿ ಮರುಪಾವತಿಸಲು ಸರ್ಕಾರ ಚಿಂತಿಸುತ್ತಿದೆ. ರೈತರು ಸಾಮಾನ್ಯವಾಗಿ ಸಾಲ ಮರುಪಾವತಿಸಲು 12 ತಿಂಗಳು ತೆಗೆದುಕೊಳ್ಳುತ್ತಾರಾದ ಕಾರಣ, ಈ ವರ್ಷದ ಬಾಕಿಯನ್ನು ಈ ವಿತ್ತೀಯ ವರ್ಷದ ಆರಂಭದಲ್ಲಿ, ಮುಂದಿನ ವರ್ಷದ ಬಾಕಿಯನ್ನು ನಂತರ 2017-18ರಲ್ಲಿ ಪಾವತಿಸುವ ಬಗ್ಗೆ ಸರ್ಕಾರ ಯೋಜಿಸಿದೆ.