ಭಾಗ್ವತರ ಮತಾಂತರ ಆರೋಪ : ಕ್ರಿಶ್ಚಿಯನ್ ನಾಯಕರು ಸಿಡಿಮಿಡಿ

ಕ್ರೈಸ್ತ ಮಿಷನರಿಗಳು ಆದಿವಾಸಿಗಳನ್ನು ಮತಾಂತರಗೊಳಿಸಲು ಯತ್ನಿಸುತ್ತಿದ್ದಾರೆಂದು ಆದಿವಾಸಿಗಳ ಜನಸಂಖ್ಯೆ ಅಧಿಕವಾಗಿರುವ ಗುಜರಾತ್ ರಾಜ್ಯದ ನವ್ಸಾರಿ ಜಿಲ್ಲೆಯ  ವನ್ಸಡಾ ಪ್ರದೇಶದಲ್ಲಿ ಇತ್ತೀಚೆಗೆ  ನಡೆದ ಹಿಂದೂ ಸಮ್ಮೇಳನವೊಂದರಲ್ಲಿ ಮಾತನಾಡುತ್ತಾ  ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿರುವುದು ಕ್ರೈಸ್ತ ಸಮುದಾಯದ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಇದಾಗಿದೆ ಎಂದು ಅವರು ದೂರಿದ್ದಾರೆ.

ಭಾಗ್ವತ್ ತಮ್ಮ ಭಾಷಣದಲ್ಲಿ ಎಲ್ಲಾ ಭಾರತೀಯರೂ ಹಿಂದೂಗಳು ಹಾಗೂ ಎಲ್ಲರೂ ಹಿಂದೂ ಸಂಸ್ಕøತಿಯನ್ನು ಒಪ್ಪಿಕೊಳ್ಳಬೇಕೆಂದು ಹೇಳಿದ್ದರಲ್ಲದೆ “ವ್ಯಾಟಿಕನ್ ಏಷ್ಯಾ ಖಂಡವನ್ನು ತನ್ನ ಮತಾಂತರ ಚಟುವಟಿಕೆಗಳಿಗೆ ಟಾರ್ಗೆಟ್ ಮಾಡಿದೆ’ ಎಂದು ಆರೋಪಿಸಿದ್ದರು. “ಕೇವಲ ಭಾರತದಲ್ಲಿ ಮಾತ್ರ ಮತಾಂತರಗೊಳ್ಳುವವರು ಸಿಗುತ್ತಾರೆ ಎಂದು ಅವರು ತಿಳಿದಿದ್ದಾರೆ” ಎಂದೂ ಹೇಳಿದ್ದರು.

“ಈ ಆರೋಪ ಸಂಪೂರ್ಣವಾಗಿ ತಪ್ಪು. ಅವರು ಇಂತಹ ಆರೋಪಗಳನ್ನು ಆಗಾಗ ಮಾಡುತ್ತಿರುತ್ತಾರೆ. ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ದೇಶ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಇದಾಗಿದೆ” ಎಂದು ಇಂಡಿಯನ್ ಕ್ಯಾಥೊಲಿಕ್ ಬಿಷಪ್ಸ್ ಆಫೀಸ್ ಫಾರ್ ಇಂಡಿಜಿನಸ್ ಪೀಪಲ್ ಇದರ ಕಾರ್ಯದರ್ಶಿ ಫಾ ಸ್ಟೇನಿಸ್ಲಸ್ ಟಿರ್ಕಿ ಹೇಳಿದ್ದಾರೆ. “ಭಾರತದ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಆದಿವಾಸಿಗಳು ತಮ್ಮ ಮನಃಸಾಕ್ಷಿಗನುಗುಣವಾಗಿ ತಮ್ಮ ಧರ್ಮವನ್ನು ಆಯ್ದುಕೊಳ್ಳುತ್ತಾರೆ” ಎಂದವರು ತಿಳಿಸಿದ್ದಾರೆ.

“ಧಾರ್ಮಿಕ ವಿಚಾರಗಳನ್ನು ಕೆದಕಿ, ಮುಸ್ಲಿಂ ವಿರೋಧಿ ಹೇಳಿಕೆಗಳನ್ನು  ನೀಡಿ, ಹಿಂದೂಗಳಲ್ಲಿ ಆಕ್ರೋಶ ಮೂಡಿಸಿ ಈ ಮೂಲಕ ಮತಗಳನ್ನು ಪಡೆಯುವುದರಲ್ಲಿ ಬಿಜೆಪಿ ಎತ್ತಿದ ಕೈ” ಎಂದು ಹಲವು ನಾಯಕರು ಆರೋಪಿಸಿದ್ದಾರೆ.

“ಉತ್ತರ ಭಾರತದ ಆದಿವಾಸಿ ಪ್ರದೇಶಗಳಲ್ಲಿ ವಾಸಿಸುವ ಹಲವರು  ಕ್ರೈಸ್ತ ಧವರ್iವನ್ನು ಆಲಂಗಿಸಿದ್ದಾರೆಂಬುದು ನಿಜ. ಆದರೆ ಮತಾಂತರವನ್ನು ಬಲವಂತವಾಗಿ ಯಾ ಮೋಸದಿಂದ ಮಾಡಲಾಗಿಲ್ಲ” ಎಂದು ಹೇಳುತ್ತಾರೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಆದಿವಾಸಿ ಸಂಶೋಧಕರಾಗಿರುವ ಫಾ ವಿನ್ಸೆಂಟ್ ಎಕ್ಕ.

“ಹಿಂದೂ ಧರ್ಮದಲ್ಲಿ ಜಾತಿಯಾಧಾರದಲ್ಲಿ ಜನತೆಯ ನಡುವೆ ತಾರತಮ್ಯ ಮಾಡಲಾಗುತ್ತಿರುವುದೇ ಮತಾಂತರಗಳಿಗೆ ಕಾರಣ” ಎಂದು ಅವರು ವಾದಿಸುತ್ತಾರೆ. “ತಾರತಮ್ಯ ನೀತಿ ಅನುಸರಿಸುವಾಗ ಜನರು ಸಹಜವಾಗಿ ಬೇರೊಂದು ಧರ್ಮದ ಕಡೆಗೆ ಆಕರ್ಷಿತರಾಗಿ ಅತ್ತ ಹೋಗುತ್ತಾರೆ” ಎಂದು ಫಾ ಎಕ್ಕ ತಿಳಿಸುತ್ತಾರೆ.

“ಭಾರತವನ್ನು ಹಿಂದೂ ದೇಶವನ್ನಾಗಿಸುವ  ಅವರ ಯೋಜನೆಯ ಭಾಗವಾಗಿಯೇ  ಭಾಗವತ್ ಅವರ ಆರೋಪ ಕೇಳಿ ಬಂದಿದೆ” ಎಂದು ಹೇಳುತ್ತಾರೆ ಜೆಸೂಟ್ ಸಂಸ್ಥೆಯಾಗಿರುವ ಇಂಡಿಯನ್ ಸೋಶಿಯಲ್ ಇನಸ್ಟಿಟ್ಯೂಟ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಫಾ. ಡೆನ್ಝಿಲ್ ಫೆರ್ನಾಂಡಿಸ್. “ಮತಾಂತರ ವಿಚಾರವನ್ನು ಎತ್ತಿ, ಹಿಂದು ಮತ ಬ್ಯಾಂಕ್ ಸೃಷ್ಟಿಸಿ ಅವರು ನಿಜವಾದ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯುತ್ತಾರೆ” ಎಂದು ಅವರು ವಿವರಿಸುತ್ತಾರೆ.

ಜನಗಣತಿ ಇಲಾಖೆಯ ಅಂಕಿಅಂಶಗಳ ಪ್ರಕಾರ ದೇಶದ ಆದಿವಾಸಿ ಕ್ರೈಸ್ತರ ಜನಸಂಖ್ಯೆ 2001ರಲ್ಲಿದ್ದ 63.9 ಲಕ್ಷದಿಂದ 2011ರಲ್ಲಿ 1.03 ಕೋಟಿಗೇರಿ ಶೇ 63ರಷ್ಟು ಹೆಚ್ಚಾಗಿದ್ದರೆ, ಆದಿವಾಸಿ ಹಿಂದೂಗಳ ಜನಸಂಖ್ಯೆ ಈ ಅವಧಿಯಲ್ಲಿ 6 ಕೋಟಿಯಿಂದ 8.41 ಕೋಟಿಗೇರಿ ಶೇ 39ರಷ್ಟು ಹೆಚ್ಚಾಗಿದೆ.

ದೇಶದಲ್ಲಿ  ಒಟ್ಟು 10.4 ಕೋಟಿ ಆದಿವಾಸಿಗಳಿದ್ದಾರೆಂದು 2011ರ ಜನಗಣತಿ ತಿಳಿಸುತ್ತದೆ.

ಪಾಕಿಸ್ತಾನದ ಕ್ರೈಸ್ತ ಪ್ರಚಾರಕಗೆ ಜೈಲು

ಇಸ್ಲಾಮಾಬಾದ್ : ಲಾಹೋರಿನ ಕ್ರೈಸ್ತ ಮತಪ್ರಚಾರಕನೊಬ್ಬನನ್ನು  ಕುರಾನ್ ಪ್ರತಿಯೊಂದನ್ನು ಹಾನಿಗೊಳಿಸಿದ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಲಾಹೋರಿನ ಕಮಹನ್ ಗ್ರಾಮದ ನಿವಾಸಿಯಾಗಿರುವ ಆರೋಪಿ 41 ವರ್ಷದ ಬಾಬು ಶಹಬಾಜ್ ಎಂಬವನ ಪತ್ನಿ ಹಾಗೂ ಪುತ್ರಿಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ಇಂಗ್ಲೆಂಡಿನ ಸೆಂಟರ್ ಫಾರ್ ಲೀಗಲ್ ಏಡ್, ಅಸಿಸ್ಟೆನ್ಸ್ ಎಂಡ್ ಸೆಟ್ಲಮೆಂಟ್ ತಿಳಿಸಿದೆ.

ಸ್ಥಳೀಯ ಮುಸ್ಲಿಂ  ಹಾಜಿ ನದೀಮ್ ಎಂಬವನು ದೂರು ದಾಖಲಿಸಿ ಮೂರು ಮಕ್ಕಳ ತಂದೆಯಾಗಿರುವ ಶಹಬಾಝ್  ಕುರಾನಿನ ಪ್ರತಿಯೊಂದರ ಪುಟಗಳನ್ನು ಹರಿದಿದ್ದಾರೆಂದು ಆರೋಪಿಸಿದ್ದನು.

ಪಾಕಿಸ್ತಾನದಲ್ಲಿ ಜಾರಿಯಲ್ಲಿರುವ ಧರ್ಮನಿಂದನೆ ಸಂಬಂಧಿತ ಕಾನೂನುಗಳನ್ನು  ಮುಸ್ಲಿಮೇತರರ ವಿರುದ್ಧ ದ್ವೇಷ ಸಾಧಿಸಲು ಉಪಯೋಗಿಸಲಾಗುತ್ತಿರುವ ಇನ್ನೊಂದು ಪ್ರಕರಣ ಇದಾಗಿದೆಯೆಂದು  ಸೆಂಟರ್ ಫಾರ್ ಲೀಗೆಲ್ ಏಡ್ ಹೇಳಿದೆ.