ಸಂಘ ಪರಿವಾರವನ್ನು ಒಗ್ಗೂಡಿಸಿ ಅಮೂಲಾಗ್ರ ಬದಲಾವಣೆ ತರುತ್ತಿರುವ ಮೋಹನ ಭಾಗ್ವತ

ಯಾರೊಡನೆಯೂ ಜಗಳಕ್ಕಿಳಿಯದೆ ಅವರ ಮನಸ್ಸನ್ನು ಗೆಲ್ಲುವ ಸಾಮಥ್ರ್ಯ ಭಾಗ್ವತ್ ಕುಟುಂಬ ಹೊಂದಿತ್ತೆನ್ನಲಾಗಿದೆ. ಇಂತಹುದೇ ಗುಣಗಳನ್ನು ಭಾಗ್ವತ್ ಅವರೂ ಮೈಗೂಡಿಸಿಕೊಂದು ಬಂದಿದ್ದಾರೆ.

  • ಪವನ್ ದಹತ್

ಒಂದೊಮ್ಮೆ ಹಿರಿಯ ಪುರುಷರ ಸಂಘಟನೆಯೆಂಬಂತೆಯೇ ಕಂಡುಬರುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, 2004ರ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ನಂತರದ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ  2009ರಲ್ಲಿ ಅಮೂಲಾಗ್ರ ಬದಲಾವಣೆ ತರಲು ನಿರ್ಧರಿಸಿತ್ತು.  ಪ್ರಮೋದ್ ಮಹಾಜನ್ ಅವರ ಸಾವು, ಎಲ್ ಕೆ ಅಡ್ವಾಣಿ ಅವರ ಸುತ್ತ ಹರಡಿಕೊಂಡ ವಿವಾದ, ವಾಜಪೇಯಿಯವರು ಸಕ್ರಿಯ ರಾಜಕಾರಣದಿಂದ ದೂರ ಸರಿದ ಘಟನೆ, ಆಗಿನ ಆರೆಸ್ಸೆಸ್  ಮುಖ್ಯಸ್ಥ ಕೆ ಸಿ ಸುದರ್ಶನ್ ಹಾಗೂ ವಿಹಿಂಪ ಮುಖ್ಯಸ್ಥ ಅಶೋಕ್ ಸಿಂಘಾಲ್ ಅವರ ಆರೋಗ್ಯ ಸಮಸ್ಯೆಗಳೇ ಈ ನಿರ್ಧಾರಕ್ಕೆ ಕಾರಣವಾಗಿದ್ದವು.

ಆದರೆ ಈ ಕಾರ್ಯಭಾರ ಯಾವ ವ್ಯಕ್ತಿಗೆ ವಹಿಸಲ್ಪಟ್ಟಿತ್ತೋ ಅವರಂತೂ ಸಂಘದಲ್ಲಿ ಅಷ್ಟೊಂದು ದೊಡ್ಡ ಹೆಸರು ಪಡೆದಿರಲಿಲ್ಲ ಹಾಗೂ ಹೆಚ್ಚಿನ ಎಲ್ಲ ಪ್ರಮುಖರಿಗಿಂತಲೂ ಕಿರಿಯರಾಗಿದ್ದರು. ಅವರೇ ಸಂಘದ ಈಗಿನ ಮುಖ್ಯಸ್ಥ ಮೋಹನ್ ಭಾಗ್ವತ್. ಇಂದು ಅವರು ಸಂಘ ಹಾಗೂ ಅದರ ಸುಮಾರು 36 ಸಹಸಂಘಟನೆಗಳ  ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.

ಮೋಹನ ಭಾಗ್ವತ ಅವರು 1950ರಲ್ಲಿ  ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಕಟ್ಟಾ ಆರೆಸ್ಸೆಸ್ ಬೆಂಬಲಿಗ ಕುಟುಂಬವೊಂದರಲ್ಲಿ ಹುಟ್ಟಿದರು. ಅಜ್ಜ ನಾನಾಸಾಹೇಬ್  ಆರಸ್ಸೆಸ್ ಸ್ಥಾಪಕ ಕೆ ಬಿ ಹೆಡ್ಗೆವಾರ್ ಅವರ ಸಹವರ್ತಿಯಾಗಿದ್ದರೆ ಭಾಗ್ವತ್ ಅವರ ತಂದೆ ಮಧುಕರ್ರಾವ್ ಗುಜರಾತ್ ರಾಜ್ಯದ ಆರೆಸ್ಸೆಸ್ ಪ್ರಚಾರಕರಾಗಿದ್ದರು. ತಾಯಿ ಮಾಲತಿ ಆರೆಸ್ಸೆಸ್ ಮಹಿಳಾ ಘಟಕದ ಸದಸ್ಯೆಯಾಗಿದ್ದರು.

ಯಾರೊಡನೆಯೂ ಜಗಳಕ್ಕಿಳಿಯದೆ ಅವರ ಮನಸ್ಸನ್ನು ಗೆಲ್ಲುವ ಸಾಮಥ್ರ್ಯ ಭಾಗ್ವತ್ ಕುಟುಂಬ ಹೊಂದಿತ್ತೆನ್ನಲಾಗಿದೆ. ಇಂತಹುದೇ ಗುಣಗಳನ್ನು ಭಾಗ್ವತ್ ಅವರೂ ಮೈಗೂಡಿಸಿಕೊಂದು ಬಂದಿದ್ದಾರೆ.

ಭಾಗ್ವತ್  ಯುವಕರಾಗಿದ್ದಾಗಲೇ ಆರೆಸ್ಸೆಸ್ ಸಂಘಟನೆಗೆ ತಮ್ಮ ಜೀವನವನ್ನು ಮುಡಿಪಾಗಿರಿಸಿದವರು. ಚಂದ್ರಾಪುರ ಎಂಬ ಗ್ರಾಮೀಣ ಭಾಗದಲ್ಲಿ ಸುಮಾರು ಆರು ತಿಂಗಳು ಪಶುವೈದ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಉದ್ಯೋಗ ತೊರೆದು ಅಕೋಲಾಗೆ ತೆರಳಿ ಅಲ್ಲಿ ಜಿಲ್ಲಾ ಆರೆಸ್ಸೆಸ್ ಪ್ರಚಾರಕರಾದರು. ಮುಂದೆ ವಿದರ್ಭ ಹಾಗೂ ಬಿಹಾರದಲ್ಲಿ ಸೇವೆ ಸಲ್ಲಿಸಿದ ಅವರು ಆರೆಸ್ಸೆಸ್ ಸಂಘಟನೆಯಲ್ಲಿ ಮೇಲೇರುತ್ತಾ ಹೋಗಿ 2000ರಲ್ಲಿ ಸಹಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಆದರು.

1994ರಿಂದ 2004ರ ತನಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಆಗಿನ ಆರೆಸ್ಸೆಸ್ ಮುಖ್ಯಸ್ಥ ಸುದರ್ಶನ್ ಹಾಗೂ ತೆಂಗ್ಡಿ ಗುಂಪು ಮತ್ತು ವಾಜಪೇಯಿ ಬಣಗಳ ನಡುವೆ ಆಗಾಗ ಚಕಮಕಿ ನಡೆಯುತ್ತಿತ್ತು. ಮಾರ್ಚ್ 2009ರಲ್ಲಿ ಆರೆಸ್ಸೆಸ್  ಪದಾಧಿಕಾರಿಗಳು ಹೊಸ ಸಹಕಾರ್ಯವಾಹ ಅವರನ್ನು ಆರಿಸಲು ನಾಗ್ಪುರದಲ್ಲಿ ಸಭೆ ಸೇರಿದಾಗ ಆಗಿನ ಮುಖ್ಯಸ್ಥ ತಮ್ಮ ಸರಸಂಘಚಾಲಕ ಹುದ್ದೆಗೆ ಮೋಹನ್ ಭಾಗ್ವತ್ ಅವರ ಹೆಸರು ಸೂಚಿಸಿದ್ದರು. ಆಗ ಅವರಿಗೆ 59. ಅವರ ವಯಸ್ಸಿನವರೊಬ್ಬರು ಆರೆಸ್ಸೆಸ್ ಮುಖ್ಯಸ್ಥರಾಗುವುದು ಇದೇ ಪ್ರಥಮವಾಗಿತ್ತು. ಹೊರಗಿನವರಿಗೆ ಇದು ಆಶ್ಚರ್ಯ ಹುಟ್ಟಿಸಿದ್ದರೂ ಒಳಗಿನವರ ಪ್ರಕಾರ  ಈ ಕ್ರಮವನ್ನು ಬಹಳಷ್ಟು ಮುಂದಾಲೋಚನೆಯಿಂದ ಕೈಗೊಳ್ಳಲಾಗಿತ್ತು.

ಭಾಗ್ವತ ಮಾಡಿದ ಬದಲಾವಣೆಗಳೇನು ?

 ಸಂಘ ಪರಿವಾರದಲ್ಲಿ ಪದಾಧಿಕಾರಿಗಳಾಗಲು 75 ವರ್ಷ ವಯೋಮಿತಿಯನ್ನು ಅವರು ನಿಗದಿಪಡಿಸಿದರು. 2009ರ ಚುನಾವಣೆ ಅಡ್ವಾಣಿಯವರು ಸ್ಪರ್ಧಿಸಬಹುದಾದ ಕೊನೆಯ ಚುನಾವಣೆ ಎಂದು ಅವರಿಗೆ ತಿಳಿಸಲಾಯಿತು.  ಪಕ್ಷ ಸೋತಾಗ ಅವರನ್ನು ಸಂಪೂರ್ಣವಾಗಿ ಬದಿಗೆ ಸರಿಸಲಾಯಿತು, ರಾಷ್ಟ್ರ ರಾಜಕಾರಣದಲ್ಲಿ ಅಷ್ಟೊಂದು ಅನುಭವವಿಲ್ಲದ ನಿತಿನ್ ಗಡ್ಕರಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು,  ವಿಹಿಂಪ ಅಧ್ಯಕ್ಷತೆ ಪ್ರವೀಣ್ ತೊಗಾಡಿಯಾ ಅವರಿಗೆ ಹೋಯಿತು.

ಜನರು ಆರೆಸ್ಸೆಸ್ ಸಂಘಟನೆಯತ್ತ ಆಕರ್ಷಿಸುವಂತೆ ಅವರು ಮಾಡಿದರು. ಸಂಘದ ಖಾಕಿ ಶಾಟ್ರ್ಸ್ ಹೋಗಿ ಪ್ಯಾಂಟ್ ಬಂತು. ಶಾಖಾ   ಸಮಯವನ್ನು ಕಚೇರಿಗೆ ಹಾಗೂ ಶಾಲೆಗೆ ಹೋಗುವವರಿಗೆ ಅನುಕೂಲಕರವಾಗಿ ನಿಗದಿ ಪಡಿಸಲಾಯಿತು. ಅಂತರ್ಜಾಲದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅದು ಹೆಚ್ಚು ಸಕ್ರಿಯವಾಯಿತು,

ಅವರು ಯಶಸ್ಸು ಕಂಡರೇ ?

2014ರ ಚುನಾವಣೆಯಲ್ಲಿ ಬಿಜೆಪಿ ಜತೆ ಸಂಘ ಪರಿವಾರ ಕೂಡ ಪರಿಶ್ರಮಗೈದ ಪರಿಣಾಮ ಪಕ್ಷ ಗೆದ್ದಿತು.  ಸಂಘದಲ್ಲಿ ಸಾಕಷ್ಟು ಅಮೂಲಾಗ್ರ ಬದಲಾವಣೆಗಳನ್ನು ತಂದು ಅದರಲ್ಲಿ ಯಶಸ್ವಿಯೂ ಆದರು ಭಾಗ್ವತ್. ಸದ್ಯ ಸಂಘದ ಮುಂದೆ ಹಲವು ಗುರಿಗಳಿವೆ. ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಸಂವಿಧಾನದ 270ನೇ ವಿಧಿಯ ರದ್ದತಿ ಹಾಗೂ ಸಮಾನ ನಾಗರಿಕ ಸಂಹಿತೆ  ವಿಚಾರದಲ್ಲಿ ಅದು ಇನ್ನೂ ಯಶಸ್ವಿಯಾಗಿಲ್ಲ. ಇದು ಯಶಸ್ಸು ಕಾಣಬೇಕೆಂಬುದು ಭಾಗ್ವತ್ ಆವರ ಇಚ್ಛೆ. ದಲಿತರು, ಹಿಂದುಳಿದ ವರ್ಗಗಳನ್ನು ಹತ್ತಿರ ಸೇರಿಸಿ ಹಿಂದೂ ಮತಗಳನ್ನು ಹೆಚ್ಚಿಸಬೇಕೆಂದು ಅವರು ಮನಸ್ಸು ಮಾಡಿದ್ದಾರೆ. ಸಂಘ ಪರಿವಾರ ಕೋಮುವಾದಿ ಎಂಬ ಸಾಮಾನ್ಯ ಭಾವನೆಯನ್ನು ಹೋಗಲಾಡಿಸುವ ಇರಾದೆ ಅವರದು.

ಆಗ ಮಾತ್ರ ಆರೆಸ್ಸೆಸ್, ಭಾಗ್ವತ್ ಸಂಘ ಪರಿವಾರದ ದೊಡ್ಡ ಗುರಿ `ಭಾರತ್- ಪ್ರಖರ್ ಹಿಂದು ರಾಷ್ಟ್ರ’ ಹತ್ತಿರವಾಗಬಹುದು. ಅವರಿಗೆ 75 ತುಂಬಲು ಇನ್ನು ಎಂಟು ವರ್ಷ ಬಾಕಿಯಿದೆ.