ಮಾದಕ ಔಷಧಿಗಳ ಬಗ್ಗೆ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಚಿಕಿತ್ಸಾ ಉಪಯೋಗಿ ಮಾದಕ, ಅಮಲು ಉಂಟು ಮಾಡುವ ಔಷಧಗಳ ದುರ್ಬಳಕೆ ಕುರಿತು ಔಷಧ ನಿಯಂತ್ರಣ ಇಲಾಖಾ ವತಿಯಿಂದ ಉಳ್ಳಾಲ, ತೊಕ್ಕೊಟ್ಟು, ದೇರಳಕಟ್ಟೆ, ತಲಪಾಡಿ ಮತ್ತು ನಾಟೆಕಲ್ ಪ್ರದೇಶದ ಔಷಧ ವ್ಯಾಪಾರಿಗಳಿಗೆ ತಿಳುವಳಿಕೆ ನೀಡಲಾಯಿತು.

ಚಿಕಿತ್ಸಾ ಉಪಯೋಗಿ ಅವಲಂಬನೆ ಉಂಟುಮಾಡುವ ಔಷಧಿಗಳನ್ನು ಅಧಿಕೃತ ಔಷಧ ಸರಬರಾಜುದಾರರಿಂದ ಪಡೆದು ಅವಶ್ಯವಿರುವ ರೋಗಿಗಳಿಗೆ ವೈದ್ಯರ ಸಲಹಾ ಚೀಟಿ ಮೇರೆಗೆ ಮಾತ್ರ ಮಾರಾಟ ಮಾಡುವಂತೆ ಸೂಚಿಸಲಾಯಿತು. ಯಾವುದೇ ವೈದ್ಯರ ಅನಧಿಕೃತ ಸಲಹಾ ಚೀಟಿಗೆ ಹಾಗೂ ವೈದ್ಯರ ಸಲಹಾ ಚೀಟಿ ಇಲ್ಲದೆ ಇಂತಹ ಔಷಧಿಗಳನ್ನು ಜನಸಾಮಾನ್ಯರಿಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು.

ಶಾಲಾ ಕಾಲೇಜುಗಳು ಹೆಚ್ಚು ಇರುವ ಕಡೆಗಳಲ್ಲಿ ವಿದ್ಯಾರ್ಥಿಗಳು ಇಂತಹ ಔಷಧಗಳ ಸೇವನೆಯಿಂದ ದುಶ್ಚಟಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಔಷಧ ವ್ಯಾಪಾರಸ್ಥರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಇವುಗಳಿಗೆ ಅವಕಾಶ ನೀಡಬಾರದು. ಯಾರಾದರೂ ಒತ್ತಾಯ ಪೂರಕವಾಗಿ ಇಂತಹ ಔಷಧಗಳಿಗೆ ಬೇಡಿಕೆ ಇಟ್ಟಲ್ಲಿ, ಬೆದರಿಕೆ ಒಡ್ಡಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ನೀಡುವಂತೆ ಸೂಚಿಸಲಾಯಿತು.

ಸಾರ್ವಜನಿಕರು ವೈದ್ಯರ ಸಲಹಾ ಚೀಟಿಯ ಮೇರೆಗೆ ಮಾತ್ರ ಔಷಧಿಗಳನ್ನು ಅಧಿಕೃತ ಔಷಧ ವ್ಯಾಪಾರಸ್ಥರಿಂದ ಖರೀದಿಸಿ ಉಪಯೋಗಿಸಲು ಕೋರಲಾಯಿತು.