ಮನಿ’ ವಿಚಾರದಲ್ಲಿ `ಮಿಸ್ಟೇಕ್’ ಮಾಡುತ್ತಿದ್ದೀರಾ ? ಎಚ್ಚರ !

ಹಣಕಾಸಿನ ವಿಚಾರದಲ್ಲಿ ಎಲ್ಲಾ ವಯಸ್ಸಿನವರೂ ತಪ್ಪೆಸಗುವ ಸಾಧ್ಯತೆಯಿದೆ.  ವೇತನ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂಬ ಸಂದೇಶ ಬಂದ ಕೂಡಲೇ ಇರುವ ಸಂತೋಷ ಆರ್ಥಿಕ ನಿರ್ವಹಣೆ ಸರಿಯಾಗಿರದೇ ಇದ್ದಲ್ಲಿ ಹೆಚ್ಚು ಕಾಲ ಬಾಳದು. ಹಾಗಾದರೆ ಜನರು ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾಗಿ ಎಸಗುವ ತಪ್ಪುಗಳೇನು ?

 ಸಾಮಥ್ರ್ಯಕ್ಕಿಂತಲೂ ಹೆಚ್ಚಿನ ಖರ್ಚು ಮಾಡುವುದು : ಟೀವಿಯಲ್ಲಿ ಪ್ರಸಾರವಾಗುವ ಹಲವಾರು ಧಾರಾವಾಹಿಗಳಲ್ಲಿ ತೋರಿಸಲಾಗುವ ಆಡಂಬರದ ಜೀವನ ನಡೆಸುವವರ ಚಿತ್ರಣಗಳು ಜನರ ಮನಸ್ಸಿನಲ್ಲಿ ಹಾಸು ಹೊಕ್ಕಾಗಿ ಹಲವರು ತಮಗೆ ಅಷ್ಟು ಆರ್ಥಿಕ ಸಾಮಥ್ರ್ಯವಿಲ್ಲದೇ ಇದ್ದರೂ ಹಣವನ್ನು ನೀರಿನಂತೆ ಖರ್ಚು ಮಾಡಿ ತಾವು ಇತರರಿಗಿಂತ ಕಡಿಮೆಯಿಲ್ಲ ಎಂದು ತೋರಿಸುವ ಪ್ರಯತ್ನ ಮಾಡುತ್ತಾರೆ. ಸಾಲ ಕೂಡ ಸುಲಭವಾಗಿ ದೊರೆಯುವುದರಿಂದ ಜನರು ಬಹಳ ಬೇಗನೇ ಆಡಂಬರದ ಸೆಳೆತಕ್ಕೊಳಗಾಗುತ್ತಾರೆ. ಈ ರೀತಿಯಾಗಿ ಹಣ ಖರ್ಚು ಮಾಡುತ್ತಾ ಸಾಗಿದರೆ ಮುಂದೊಂದು ದಿನ ಅದು ಜೀವನವನ್ನೇ ಅಲ್ಲಾಡಿಸಬಹುದು. ಇತಿಮಿತಿಯೊಳಗೇ ಖರ್ಚು ಮಾಡುವುದು ಅತ್ಯಂತ ಮುಖ್ಯ.

ಕ್ರೆಡಿಟ್ ಕಾರ್ಡ್ ಬಳಕೆ – ಎಚ್ಚರಿಕೆಯಿರಲಿ : ಕೈಯ್ಯಲ್ಲಿ ಕ್ರೆಡಿಟ್ ಕಾರ್ಡ್ ಇದೆಯೆಂದ ಮಾತ್ರಕ್ಕೆ ಮನಸ್ಸಿಗೆ ತೋಚಿದಂತೆ ಶಾಪಿಂಗ್ ಮುಂತಾದ ಇತರ ಚಟುವಟಿಕೆಗಳಿಗೆ  ಖರ್ಚು ಮಾಡುವುದು ಸರಿಯಲ್ಲ. ನಿಮ್ಮ ಬಾಕಿ ಮೊತ್ತ ಬಹಳ ಬೇಗನೇ ಹೆಚ್ಚಾಗಿ ನಿಮಗೆ ಅದನ್ನು ಹಿಂದಿರುಗಿಸಲು ಕಷ್ಟವಾಗಬಹುದು. ಬಾಕಿ ಮೊತ್ತದ ಮೇಲೆ ಕ್ರೆಡಿಟ್ ಕಾರ್ಡುಗಳು ಮಾಸಿಕ  ಶೇ 3.49ರಷ್ಟು ಬಡ್ಡಿ ಹೇರುವುದರಿಂದ  ಒಂದು ವರ್ಷವಾಗುತ್ತಲೇ ಹಿಂದಿರುಗಿಸಬೇಕಾದ ಬಡ್ಡಿ ಹಣವೇ ಅಧಿಕವಾಗುವ ಸಂಭವವಿದೆ. ಬಾಕಿ ಮೊತ್ತ ಬಿಡಿ, ಬಡ್ಡಿ ಹಿಂದಿರುಗಿಸುವುದೇ ದೊಡ್ಡ ಸಮಸ್ಯೆಯಾಗಿ ಕಾಡಲಿದೆ.

ಮಾಸಿಕ ಬಜೆಟ್ ಇಲ್ಲದೇ ಇರುವುದು : ಹೆಚ್ಚಿನ ಜನರಿಗೆ ತಾವು ತಿಂಗಳೊಂದರ ಅವಧಿಯಲ್ಲಿ ಮನೆಗೆ ಅವಶ್ಯಕ ವಸ್ತುಗಳ ಖರೀದಿಗೆ, ವಿದ್ಯುಚ್ಛಕ್ತಿ, ನೀರಿನ ಬಿಲ್ ಮುಂತಾದವುಗಳಿಗೆ ಎಷ್ಟು ವ್ಯಯ ಮಾಡುತ್ತೇವೆ ಎಂಬುದೂ ತಿಳಿದಿರುವುದಿಲ್ಲ. ಇನ್ನು ಕೆಲವರಿಗೆ ಅದು ತಿಳಿದಿದ್ದರೂ ಅದರ ಬಗ್ಗೆ ಯೋಚಿಸದೆ ಖರ್ಚು ಮಾಡುತ್ತ ಹೋಗಿ ಕೊನೆಗೊಂದು ದಿನ ಕೈಚೆಲ್ಲಿ ಕುಳಿತು ಬಿಡುತ್ತಾರೆ. ಹೆಚ್ಚಿನವರು ಮಾಸಿಕ ಬಜೆಟ್ ತಯಾರಿಸುವ ಗೋಜಿಗೇ ಹೋಗುವುದಿಲ್ಲ. ಬಜೆಟ್ ತಯಾರಿಸಿದ್ದೇ ಆದಲ್ಲಿ ಅನಗತ್ಯ ಖರ್ಚುವೆಚ್ಚಗಳನ್ನು ತಡೆಯಬಹುದು.

ತುರ್ತು ಸಮಯಕ್ಕೆ  ಹಣ ಉಳಿತಾಯ ಮಾಡದೇ ಇರುವುದು : ತುರ್ತು ಸಂದರ್ಭ ಯಾವಾಗ ಬೇಕಾದರೂ ಎದುರಾಗಬಹುದು. ಆದು ಪ್ರಕೃತಿ ವಿಕೋಪ, ಅನಾರೋಗ್ಯ ಅಥವಾ ಬೇರೇನಾದರೂ ಆಕಸ್ಮಿಕವಾಗಿರಬಹುದು. ಇಂತಹ ಸಂದರ್ಭಗಳಿಗೆಂದೇ ಹಣ ಉಳಿತಾಯ ಮಾಡಿರದೇ ಇದ್ದರೆ ಕಷ್ಟ ಖಂಡಿತ. ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಉಳಿಸುವ ಪರಿಪಾಠ ಮಾಡಿ ಅದು ರೂ 500 ಅಥವಾ ರೂ 5000 ಆಗಿರಬಹುದು.