ನೀರಿಗೆ ಆಗ್ರಹಿಸಿ ಬೆಟ್ಟಂಪಾಡಿ ಪಂ.ಗೆ ನಾಗರಿಕರ ಮುತ್ತಿಗೆ

ಪಂಚಾಯತ್ ಎದುರು ಪ್ರತಿಭಟಿಸಿದ ನಾಗರಿಕರು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಕಳೆದ ಎರಡು ವಾರಗಳಿಂದ ಬೆಟ್ಟಂಪಾಡಿ ಗ್ರಾಮದಲ್ಲಿ ಸಮರ್ಪಕ ನೀರಿನ ವ್ಯವಸ್ಥೆಯಿಲ್ಲ, ಕುಡಿಯುವ ನೀರು ವಿತರಣೆ ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಬೆಟ್ಟಂಪಾಡಿ ಗ್ರಾಮದ ಗುಢಂಯಡ್ಕ-ಪಂಜೊಟ್ಟು ಮತ್ತು ನೆಕ್ಕರೆ ನಿವಾಸಿಗಳು ಸೋಮವಾರ ಗ್ರಾ ಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

“ಜನವರಿ ತಿಂಗಳಿನಲ್ಲೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇರುವ ನೀರನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ, ನೀರು ಬಿಡುವ ಸಿಬ್ಬಂದಿಯೂ ತಾರತಮ್ಯ ಮಾಡುತ್ತಿದ್ದಾರೆ. ಶಾಸಕರ ಬರ ಪರಿಹಾರ ನಿಧಿಯಿಂದ ಕೊಳವೆ ಬಾವಿ ತೆಗೆದರೂ ಅದರ ನೀರನ್ನು ಗ್ರಾಮಸ್ಥರಿಗೆ ನೀಡುತ್ತಿಲ್ಲ. ಅಧಿಕಾರಿಗಳು ಕೊಳವೆ ಬಾವಿಯನ್ನು ಗ್ರಾ ಪಂ.ಗೆ ಹಸ್ತಾಂತರ ಮಾಡದೆ ಗ್ರಾಮಸ್ಥರ ಜೊತೆ ಚೆಲ್ಲಾಟವಾಡುತ್ತಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದರು.

ಒಂದು ವಾರದೊಳಗೆ ನೀರಿನ ವ್ಯವಸ್ಥೆ ಮಾಡದೇ ಇದ್ದಲ್ಲಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ವಾರದೊಳಗೆ ವ್ಯವಸ್ಥೆ ಮಾಡುವುದಾಗಿ ಪಿಡಿಒ ಶಾಂತಾರಾಮ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದುಕೊಳ್ಳಲಾಗಿದೆ.