ಕಾರವಾರ -ಅಂಕೋಲಾದಲ್ಲಿ ಯಾರಿಗೂ ಗೊತ್ತಿರದ ಬೆಂಗಳೂರು ಮಹಿಳೆ ಬಿಜೆಪಿ ಟಿಕೆಟ್ ರೇಸಿನಲ್ಲಿ !

 

ಶಾರದಾ ನಾಯ್ಕ ಬೆಂಗಳೂರು ಬಿಜೆಪಿಯಲ್ಲಿ ಶಾರದಾ ಗೌಡಳಾಗಿ, ಕಾರವಾರದಲ್ಲೀಗ

ಮತ್ತೆ ಶಾರದಾ ನಾಯ್ಕಳಾದ ಪ್ರಹಸನ.

 ವಿಶೇಷ ವರದಿ

ಬೆಂಗಳೂರು/ಕಾರವಾರ : ಬೆಂಗಳೂರು ನಗರ ಮಹಿಳಾ ಅಧ್ಯಕ್ಷೆ ಶಾರದಾ ನಾಯ್ಕ ಯಾನೆ ಶಾರದಾ ಗೌಡಾ ಅವರು ಬೆಂಗಳೂರು ನಗರದಲ್ಲಿ ಬಿಜೆಪಿಯನ್ನು ಸಂಘಟಿಸುವುದು ಬಿಟ್ಟು ಕಾರವಾರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣು ಹಾಕಿರುವುದು ಬೆಂಗಳೂರು ಮಹಾನಗರ ಬಿಜೆಪಿಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.

ಕೇವಲ ಎರಡು ವರ್ಷಗಳ ಹಿಂದೆ ತಾನು ಒಕ್ಕಲಿಗ ಸಮಾಜಕ್ಕೆ ಸೇರಿದ ವ್ಯಕ್ತಿಯೆಂದು ಬಿಜೆಪಿ ಹೈಕಮಾಂಡನ್ನು ನಂಬಿಸಿ ತನ್ನ ಮಾಧ್ಯಮದ ಸಂಪರ್ಕದಿಂದ ಬೆಂಗಳೂರು ಮಹಾನಗರ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಶಾರದಾ ನಾಯ್ಕ ಬೆಂಗಳೂರು ಬಿಜೆಪಿಯಲ್ಲಿ ಶಾರದಾ ಗೌಡ ಎಂಬ ಹೆಸರಿನಿಂದ ಅಧ್ಯಕ್ಷೆಯಾಗಿದ್ದಾರೆ. ಅದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಶಾರದಾ ನಾಯ್ಕ ಅವರು ಮಂಡ್ಯ ಮೂಲದ

ಒಕ್ಕಲಿಗ ಸಮಾಜದ ಪತ್ರಕರ್ತರೊಬ್ಬರನ್ನು ಮದುವೆಯಾದ ನಂತರ ಮಂಡ್ಯದ ಒಕ್ಕಲಿಗ ಕೋಟಾದಲ್ಲಿ ಅಧ್ಯಕ್ಷೆಯಾಗಿದ್ದರು. ಆದರೆ ಇತ್ತೀಚೆಗೆ ಕಾರವಾರ ವಿಧಾನಸಭಾ ಕ್ಷೇತ್ರದಿಂದ ತಾನು ಟಿಕೆಟ್ ಆಕಾಂಕ್ಷಿಯೆಂದು ಹೇಳಿಕೊಳ್ಳುತ್ತಿರುವ ಶಾರದಾ, ಕಾರವಾರ ಕ್ಷೇತ್ರದಲ್ಲಿ ತನ್ನ ಪೂರ್ವಾಶ್ರಮದ ಶಾರದಾ ನಾಯ್ಕ ಎಂಬ ಹೆಸರಿನಿಂದ ಟಿಕೆಟಿಗಾಗಿ ಪ್ರಯತ್ನಿಸುತ್ತಿದ್ದಾರೆ.