ವಾರದಲ್ಲಿ 4 ದಿನ ಶ್ರವಣಬೆಳಗೊಳ ಮೂಲಕ ಬೆಂಗಳೂರು -ಕಾರವಾರ ಎಕ್ಸಪ್ರೆಸ್ ಸಂಚಾರ

ಪ್ರಸ್ತಾಪಕ್ಕೆ ರೈಲ್ವೆ ಮಂಡಳಿಯಿಂದ ಹಸಿರು ನಿಶಾನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೆಂಗಳೂರು-ಕಾರವಾರ/ಕಣ್ಣೂರು-ಬೆಂಗಳೂರು ರಾತ್ರಿ ರೈಲನ್ನು  ಅತ್ಯಂತ ಹತ್ತಿರದ ಮಾರ್ಗದಲ್ಲಿ – ಕುಣಿಗಲ್ ಹಾಗೂ ಶ್ರವಣಬೆಳಗೊಳ ಮುಖಾಂತರ ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಚರಿಸುವಂತೆ  ಮಾಡುವ ನೈಋತ್ಯ ರೈಲ್ವೆ ಪ್ರಸ್ತಾಪಕ್ಕೆ ರೈಲ್ವೆ ಮಂಡಳಿ ತನ್ನ ಒಪ್ಪಿಗೆ ನೀಡಿದೆ. ಈ ಮೂಲಕ ಕರಾವಳಿ ಜನರ  ಬಹುಕಾಲದ ಬೇಡಿಕೆಯನ್ನು ಈಡೇರಿಸಿದಂತಾಗಿದೆ.

ಶ್ರವಣಬೆಳಗೊಳ ಮಾರ್ಗ ಮೂಲಕ ಈ ರೈಲು  ಸಂಚರಿಸುವುದರಿಂದ ಪ್ರಯಾಣ ದೂರ 90 ಕಿ ಮೀ ಕಡಿತಗೊಳ್ಳಲಿದೆಯಲ್ಲದೆ ಪ್ರಯಾಣ ಅವಧಿಯೂ ಎರಡು ಗಂಟೆಗಳಷ್ಟು ಕಡಿಮೆಯಾಗಲಿದೆ. ಈಗ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣ ಅವಧಿ 18 ಗಂಟೆಗಳಾಗಿದೆ. ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ಮೈಸೂರು ಮುಖಾಂತರ 447 ಕಿ ಮೀ ದೂರ ಇದ್ದರೆ, ಶ್ರವಣಬೆಳಗೊಳ ಮೂಲಕ ಇದು 357 ಕಿ ಮೀ ಆಗಿದೆ. ಹೊಸ ಮಾರ್ಗದಲ್ಲಿ ರೈಲು ವಾರದಲ್ಲಿ ನಾಲ್ಕು ದಿನ ಸಂಚರಿಸಿದರೆ, ಉಳಿದ ಮೂರು ದಿನಗಳಲ್ಲಿ ಅದು ಈಗಿನ ಮೈಸೂರು  ಮಾರ್ಗದ ಮೂಲಕ ಸಂಚರಿಸುವುದು.

ಈಗಾಗಲೇ ಮೈಸೂರು ಮೂಲಕ ಸಾಗುವ ರೈಲಿನ ಟಿಕೆಟುಗಳ ಮುಂಗಡ ಬುಕ್ಕಿಂಗ್ ಸಾಕಷ್ಟು ನಡೆದಿರುವುದರಿಂದ ಸದ್ಯ ಬುಕ್ಕಿಂಗ್ ಪ್ರಕ್ರಿಯೆಯನ್ನು ನಿಲ್ಲಿಸಿ  ಹೊಸ ಮಾರ್ಗದಲ್ಲಿ ರೈಲು ಸಂಚರಿಸುವ ದಿನವನ್ನು ನಿಗದಿಪಡಿಸುವುದು ಈಗಿನ ಅಗತ್ಯವಾಗಿದೆ ಎಂದು ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ.

ಹೊಸ ಮಾರ್ಗದಲ್ಲಿ ಸಂಚರಿಸುವುದರಿಂದ ಕಾರವಾರ ಎಕ್ಸಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ಯಾ ಕಾರವಾರವನ್ನು ಈಗಿನ ವೇಳಾಪಟ್ಟಿಗಿಂತ ಬೇಗನೇ ತಲುಪದು. ಬದಲಾಗಿ ರೈಲು ಹೊರಡುವ ಅವಧಿಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಮಂಗಳೂರು ಸೆಂಟ್ರಲ್ ಹಾಗೂ ಕಾರವಾರದಿಂದ ರೈಲು ಹೊರಡುವ ಅವಧಿಯಲ್ಲೂ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಬೆಂಗಳೂರು ವಿಭಾಗದಿಂದ ವಿರೋಧ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಈ ರೈಲನ್ನು ಪ್ರತಿದಿನ ಸರಾಸರಿ 620 ಪ್ರಯಾಣಿಕರು ಹತ್ತುತ್ತಿದ್ದು ಈ ರೈಲನ್ನು ಶ್ರವಣಬೆಳಗೊಳ ಮೂಲಕ  ಸಂಚರಿಸುವಂತೆ ಮಾಡಿರುವ ನಿರ್ಣಯ ಅವರಿಗೆ ಸಮಾಧಾನ ತಂದಿಲ್ಲ. ಇದು ತಾಂತ್ರಿಕವಾಗಿ ಯಾ ವಾಣಿಜ್ಯಕವಾಗಿ  ಸರಿಯಾಗದು ಎಂಬ ವಾದ  ಈ ವಿಭಾಗದಿಂದ ಕೇಳಿಬರುತಿದ್ದು ಮೈಸೂರಿನಿಂದ ಕರಾವಳಿ ಭಾಗದ ಕಡೆ ಸಂಚರಿಸುವ ಏಕೈಕ ರೈಲು ಇದಾಗಿರುವು ಕಾರಣದಿಂದಲೂ ಈ ಭಾಗದ ಹಲವು ಜನಪ್ರತಿನಿಧಿಗಳು ಈ ರೈಲಿನ ಮಾರ್ಗ ಬದಲಾವಣೆ ವಿರೋಧಿಸುತ್ತಿದ್ದಾರೆ.