ಕೊನೆಗೂ ಬೆಂಗಳೂರು-ಹಾಸನ ರೈಲ್ವೇ ಮಾರ್ಗ ಸಂಚಾರಕ್ಕೆ ಸಿದ್ಧ

ವಿಶೇಷ ವರದಿ

ಬೆಂಗಳೂರು : ಕೊನೆಗೂ ಬೆಂಗಳೂರು-ಹಾಸನ ರೈಲ್ವೇ ಪ್ರಯಾಣಿಕರು ಸಮಾಧಾನದ ಉಸಿರು ಬಿಡುವಂತಾಗಿದೆ. ಹೌದು, ಸುಮಾರು 20 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಂದ ಜಾರಿಯಾಗಿದ್ದ ಯೋಜನೆ ಕೊನೆಗೂ ರೈಲು ಓಡಾಟಕ್ಕೆ ಸಿದ್ಧಗೊಂಡಿದೆ.

ಪ್ರಧಾನಿಯೊಬ್ಬರು ಜಾರಿಗೊಳಿಸಿದ ಯೋಜನೆ ಪೂರ್ಣಗೊಳ್ಳಲು ಬರೋಬ್ಬರಿ 20 ವರ್ಷಗಳನ್ನು ಪಡೆದುಕೊಂಡಿತು ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ನೆಲಮಂಗಲ ಮತ್ತು ಶ್ರವಣ ಬೆಳಗೊಳ ನಡುವಿನ ಸುಮಾರು 110 ಕಿ ಮೀ ಅಂತರದ  ರೈಲ್ವೇ ಮಾರ್ಗ ಈಗಾಗಲೇ ಪೂರ್ಣಗೊಂಡಿದ್ದು, ರೈಲ್ವೇ ಸುರಕ್ಷತಾ ಆಯುಕ್ತರ ಪರಿಶೀಲನೆಗಾಗಿ ಕಾಯುತ್ತಿದೆ. ಈ ತಿಂಗಳ ಅಂತ್ಯಕ್ಕೆ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ.

ನೈರುತ್ಯ ರೈಲ್ವೇ ಮಾರ್ಗ ನಿರ್ಮಾಣ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಭೂಕ್ರೋಢೀಕರಣ, ನಿಧಿ ಸಂಗ್ರಹ ಮತ್ತು ಇನ್ನಿತರ ಹತ್ತು ಹಲವು ತೊಂದರೆಗಳು ಸೇರಿದಂತೆ ಹಲವಾರು ಅಡೆತಡೆಗಳು ಎದುರಾಗಿದ್ದವು.

ಹೊಸ ರೈಲ್ವೇ ಮಾರ್ಗವು ಬೆಂಗಳೂರು ಮತ್ತು ಹಾಸನ ನಡುವೆ ಅರಸೀಕೆರೆ ಮುಖಾಂತರ 50 ಕಿಮೀ ಮತ್ತು ಮೈಸೂರು ಮುಖಾಂತರ 87 ಕಿ ಮೀ ದೂರವನ್ನು ಕಡಿತಗೊಳಿಸಿದೆ. ಪ್ರಸಕ್ತ ಪ್ರಯಾಣಿಕ ಮತ್ತು ಗೂಡ್ಸ್ ರೈಲುಗಳು ಅರಸೀಕೆರೆ ಅಥವಾ ಮೈಸೂರು ಮುಖಾಂತರ ಓಡುತ್ತಿವೆ. ಪ್ರಯಾಣದ ಸಮಯ ಕೂಡ ಒಂದು ಗಂಟೆ ಇಳಿಕೆಯಾಗಲಿದೆ.

ಇದೇ ವೇಳೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಅಂತರ ಪ್ರಸಕ್ತ ಇರುವ ಅಂತರ ಕಡಿಮೆಯಾಗಲಿದೆ. ಬೆಂಗಳೂರು-ಮಂಗಳೂರು ಪ್ರಯಾಣ ಸಮಯವೂ ಸಹ ಕನಿಷ್ಠ ಎರಡೂವರೆ ಗಂಟೆ ಕಡಿಮೆಯಾಗಲಿದೆ.

ಹೊಸ ರೈಲ್ವೇ ಮಾರ್ಗವು ಯೆಡಿಯೂರು (ಸಿದ್ದಲಿಂಗೇಶ್ವರ), ಆದಿ ಚುಂಚನಗಿರಿ, ಶ್ರವಣಬೆಳಗೊಳ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಮಂಗಳೂರು ಸೇರಿದಂತೆ  ಹಲವು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಸ್ಥಳಗಳನ್ನು ಸಂಪರ್ಕಿಸಲಿದೆ. ಕುಣಿಗಲ್, ಹಾಸನ, ಸಕಲೇಶಪುರ ಮತ್ತು ಮಂಗಳೂರು ಸೇರಿದಂತೆ ಹಲವು ವಾಣಿಜ್ಯ ಸ್ಥಳಗಳನ್ನು ಸಂಪರ್ಕಿಸುತ್ತದೆ ಎಂದು ಪ್ರಜಾ ರಾಗ ಸಲಹಾ ಸಮಿತಿಯ ಸಂಜೀವ ದ್ಯಾಮನ್ನವರ್ ಹೇಳಿದ್ದಾರೆ. ಜೊತೆಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ರೈಲ್ವೇ ಮಾರ್ಗವನ್ನು ಪರಿಚಯಿಸುತ್ತದೆ. ಸಕಲೇಶಪುರ ಮತ್ತು ಬೆಂಗಳೂರು ನಡುವೆ ಇಂಟರಸಿಟಿ ರೈಲನ್ನು ಕೂಡ ಪರಿಚಯಿಸುತ್ತದೆ ಎಂದು ಅವರು ವಿವರಿಸಿದ್ದಾರೆ.