ಆನ್ಲೈನ್ ವಂಚನೆ : 50 ಸಾವಿರ ರೂ ಕಳೆದುಕೊಂಡ ಬೆಳ್ತಂಗಡಿ ನಿವಾಸಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮೂಲತಃ ಬೆಳ್ತಂಗಡಿ ನಿವಾಸಿ, ಪ್ರಸ್ತುತ ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಧರ್ಮಸ್ಥಳ ಕೊಕ್ಕಡದ ಮೋನಪ್ಪ ಗೌಡ ಆನ್ಲೈನಿನಲ್ಲಿ ಬಂದ ಕರೆ ಸ್ವೀಕರಿಸಿ, ತನ್ನ ಎಟಿಎಂ ಕಾರ್ಡ್ ಪಿನ್ ನೀಡುವ ಮೂಲಕ ಖಾತೆಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಕರ್ತರಾಗಿರುವ ಮೋನಪ್ಪ ಗೌಡ ಇದೀಗ ಮಂಡ್ಯದ ಮಳವಳ್ಳಿ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಇವರು ಕಚೇರಿಗೆ ಹೊರಡಲು ಅನುವಾಗುತ್ತಿದ್ದಂತೆ ಮೊಬೈಲಿಗೆ ಆನ್ಲೈನ್ ಮೂಲಕ ಕರೆಯೊಂದು ಬಂದಿದ್ದು, ನಿಮ್ಮ ಎಟಿಎಂ ಕಾರ್ಡ್ ಕೋಡ್ ನೀಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನು ನಿಜವೆಂದು ನಂಬಿದ ಮೋನಪ್ಪ ಗೌಡ ಕೂಡಲೇ ನಂಬರ್ ಕೊಟ್ಟಿದ್ದಾರೆ.

ಸ್ವಲ್ಪ ಹೊತ್ತಿನಲ್ಲೇ ಇವರ ಮೊಬೈಲಿಗೆ ಹಣ ಡ್ರಾ ಮಾಡಿರುವ ಬಗ್ಗೆ ಮೆಸೇಜ್ ಬಂದಿದ್ದು, ಅದಾಗಲೇ ಇವರ ವಿಜಯಾ ಬ್ಯಾಂಕಿನ ಧರ್ಮಸ್ಥಳ ಶಾಖೆಯಿಂದ 49,950 ಹಣ ಡ್ರಾ ಮಾಡಲಾಗಿದೆ. ಇವರ ಅಕೌಂಟಿನಲ್ಲಿ 60,000 ರೂಪಾಯಿ ನಗದು ಹಣವಿತ್ತು. ವಂಚಕರು ಎರಡು ಬಾರಿ ಗುರ್ಗಾಂವಿನಿಂದ ಮತ್ತು ಇನ್ನೆರಡು ಬಾರಿ ಮುಂಬೈನಿಂದ ಹಣ ಡ್ರಾ ಮಾಡಿರುವುದು ಇವರಿಗೆ ಬಂದ ಮೊಬೈಲ್ ಮೆಸೇಜಿನಲ್ಲಿ ಗೊತ್ತಾಗಿದೆ. ಬಳಿಕ ಇವರು ತಮ್ಮ ಬ್ರಾಂಚಿಗೆ ಕರೆ ಮಾಡಿ ಹಣ ಡ್ರಾ ಆಗಿರುವ ಬಗ್ಗೆ ಖಚಿತಪಡಿಸಿದ್ದಾರೆ ಹಾಗೂ ಉಳಿದ ಹಣ ಡ್ರಾ ಆಗದಂತೆ ಬ್ಲಾಕ್ ಮಾಡಿಸಿದ್ದಾರೆ.

ಇದೀಗ ಮೋನಪ್ಪ ಗೌಡ ಅವರು ಮಳವಳ್ಳಿಯ ಬೆಳಪಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೈಬರ್ ಸೆಂಟರ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.