ನಿರ್ಮಲ ಗ್ರಾಮ ಪ್ರಶಸ್ತಿ ವಿಜೇತ ಬೆಳ್ತಂಗಡಿ ತಾಲೂಕು ಹೆಸರು ಉಳಿಸಿಕೊಳ್ಳುವಲ್ಲಿ ವಿಫಲ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವರ್ಷದ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಿಂದ ನಿರ್ಮಲ ಗ್ರಾಮ ಎಂಬ ಪ್ರಶಸ್ತಿ ಸ್ವೀಕರಿಸಿದ ಬೆಳ್ತಂಗಡಿ ತಾಲೂಕು ಇದೀಗ ಆ ಹೆಸರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬೆಳ್ತಂಗಡಿ ತಾಲೂಕು ಶೌಚಾಲಯ ನಿರ್ಮಾಣದ ಗುರಿಯನ್ನು ತಲುಪಲು ವಿಫಲವಾಗಿದೆ, ತಾಲೂಕಿನ 1,712ಕ್ಕೂ ಅಧಿಕ ಕುಟುಂಬಗಳು ಶೌಚಾಲಯವನ್ನು ಹೊಂದಿಲ್ಲ ! ಈ ಕುಟುಂಬಗಳು ಶೌಚಾಲಯವಿಲ್ಲದ್ದರಿಂದ ಬೇರೆ ದಾರಿಯಿಲ್ಲದೆ ಬಯಲು ಶೌಚವನ್ನು ಅವಲಂಬಿಸಿವೆ.

“ತಾಲೂಕಿನಲ್ಲಿ ಚದುರಿದ ಮನೆಗಳು ಇರುವುದರಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ. ಹಲವು ಮನೆಗಳು ಭೂ ದಾಖಲೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದಾಗಿ ಸರ್ಕಾರಿ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ವಿಫಲವಾಗಿವೆ” ಎಂದು ಬೆಳ್ತಂಗಡಿ ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

“ಶೌಚಾಲಯ ನಿರ್ಮಾಣದ ನಿಯಮಗಳಿಗೆ ಸಂಬಂಧಿಸಿ ಕೆಲ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ. ಅನೇಕ ಬಡ ಕುಟುಂಬಗಳು ಮನೆ ದಾಖಲೆಗಳನ್ನು ನೀಡಲು ವಿಫಲವಾಗಿವೆ. ಶೌಚಾಲಯ ನಿರ್ಮಾಣ ಯೋಜನೆ ಅಡೆತಡೆಗಳಿಂದ ಮುಕ್ತವಾಗಿರಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಿಗಿಂತ ಬೆಳ್ತಂಗಡಿ ಕ್ಷೇತ್ರ ದೊಡ್ಡದು. ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ರಸ್ತೆ ಸಂಪರ್ಕಗಳಿಲ್ಲ. ತಾಲೂಕಿನ ಗ್ರಾಮಗಳಲ್ಲಿ ನೈರ್ಮಲ್ಯತೆ ಪೂರ್ಣಗೊಳಿಸಬೇಕು. ಇದು ಗ್ರಾಮೀಣ ಆರೋಗ್ಯದ ವಿಚಾರ” ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದ್ದಾರೆ.

ಅರ್ಜಿಗಳ ಆಧಾರದ ಮೇಲೆ ಶೌಚಾಲಯಗಳಿಲ್ಲದ ಮನೆಗಳ ಅಂಕಿ ಅಂಶ 1,712 ಎಂದು ಹೇಳಬಹುದು. ಆದರೆ ಅದಕ್ಕಿಂತಲೂ ಹೆಚ್ಚು ಶೌಚಾಲಯಗಳಿಲ್ಲದ ಮನೆಗಳು ತಾಲೂಕಿನಲ್ಲಿ ಇರಬಹುದು ಎಂದು ಅವರು ಹೇಳಿದ್ದಾರೆ.

“ಗ್ರಾಮೀಣ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವ ಅವಶ್ಯಕತೆ ಇದೆ. ಸರ್ಕಾರೇತರ ಸಂಸ್ಥೆಗಳು ಸ್ವಚ್ಛತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುತ್ತಿದ್ದಂತೆ ಸರ್ಕಾರ ಕೂಡ ಶೀಘ್ರದಲ್ಲಿ ನಿಧಿ ಬಿಡುಗಡೆ ಪ್ರಕ್ರಿಯೆ ಕೈಗೊಳ್ಳಬೇಕು” ಎಂದು ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಹೇಳಿದ್ದಾರೆ.