ಮತ್ತೆ ಮಾರುಕಟ್ಟೆಯಲ್ಲಿ ಲಗ್ಗೆ ಇಡಲಿದೆ ಬೆಲ್ಲಕ್ಯಾಂಡಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಂದೊಮ್ಮೆ ಪುಟಾಣಿಗಳಿಂದ ಹಿಡಿದು ವೃದ್ಧರ ಬಾಯಲ್ಲಿ ನೀರು ಹರಿಸುತ್ತಿದ್ದ ಬೆಲ್ಲಕ್ಯಾಂಡಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡುತ್ತಿದೆ. ಚಿಕ್ಕಂದಿನಲ್ಲಿ ಇರುವಾಗ ಚೀಪುತ್ತಿದ್ದ ಬೆಲ್ಲ ಕ್ಯಾಂಡಿ ಒಂದೊಮ್ಮೆ ಏಕಾಏಕಿ ಕಣ್ಮರೆಯಾಗಿತ್ತು. ಇದೀಗ ಐಸ್ ಕ್ರೀಂ ತಯಾರಿಕೆಯಲ್ಲಿ ಪ್ರಶಸ್ತಿ ಪಡೆದ ಮಂಗಳೂರಿನ ಉದ್ಯಮಿ  ಮುಕುಂದ್ ಎಸ್ ಕಾಮತ್ ಮತ್ತೆ ತಮ್ಮ ರುಚಿಕಟ್ಟಾದ ಸ್ವಾದಿಷ್ಟ ಭರಿತ ಬೆಲ್ಲಕ್ಯಾಂಡಿಯನ್ನು ಮಂಗಳೂರಿನ ಜನತೆಗೆ ನೀಡುತ್ತಿದ್ದಾರೆ.

ಬೆಲ್ಲ, ಏಲಕ್ಕಿ ಪುಡಿ, ತೆಂಗಿನಕಾಯಿ ಹುರಿಯಿಂದ ತಯಾರಿಸಲಾದ ಸ್ವಾದಿಷ್ಟಭರಿತ ಬೆಲ್ಲಕ್ಯಾಂಡಿ ಸವಿದರೇನೇ ರುಚಿ ಗೊತ್ತಾಗೋದು.

ವಾರವೊಂದರ ಹಿಂದೆ ನಗರದಲ್ಲಿ ಬಿಡುಗಡೆಗೊಳಿಸಲಾದ ಈ ಬೆಲ್ಲ ಕ್ಯಾಂಡಿಯನ್ನು ಭಾನುವಾರ ನಡೆದ ಆರ್ ಎಕ್ಸ್ ಲೈಫ್ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳಿಗೂ ವಿತರಿಸಲಾಯಿತು. ಸುಮಾರು 2500ರಷ್ಟು ಬೆಲ್ಲ ಕ್ಯಾಂಡಿಯನ್ನು ಮುಕುಂದ್ ಎಸ್ ಕಾಮತ್ ಅವರು ಪ್ರಾಯೋಜಿಸಿದ್ದರು.

ಮುಕುಂದ್ ಅವರ ಸಹೋದರ ಪ್ರಭಾಕರ್ ಮತ್ತು ಅವರ ಸ್ನೇಹಿತರು ಕೂಡಿ ಈ ಬೆಲ್ಲ ಕ್ಯಾಂಡಿಯನ್ನು ಮತ್ತೆ ಮಾರುಕಟ್ಟೆಗೆ ತರುವಂತೆ ಮುಕುಂದ್ ಅವರಿಗೆ ಐಡಿಯಾ ನೀಡಿದ್ದರು. ಪುಟ್ಟ ಮಕ್ಕಳನ್ನು ಅದಾಗಲೇ ಸೆಳೆದಿರುವ ಬೆಲ್ಲಕ್ಯಾಂಡಿಯನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮುಕುಂದ್ ನಿರ್ಧರಿಸಿದ್ದಾರೆ.