ದೈವೀ ಸಂದೇಶ ನಂಬಿ ನೀರು ತುಂಬಿದ್ದ ಟ್ಯಾಂಕನ್ನು ಬರಿದಾಗಿಸಿದ ಗ್ರಾಮಸ್ಥರು !

ಬಳ್ಳಾರಿ : ಕೆಲವು ಕಡೆಗಳಲ್ಲಿ ಮೂಢನಂಬಿಕೆಗಳು ಇನ್ನೂ ಅದೆಷ್ಟು ಆಳವಾಗಿ ಬೇರೂರಿಬಿಟ್ಟಿವೆಯೆಂಬುದಕ್ಕೆ ಇಲ್ಲಿದೆ ಒಂದು ಜ್ವಲಂತ ಉದಾಹರಣೆ.  ಗ್ರಾಮದ ಹಿರಿಯರೊಬ್ಬರಿಗೆ ದೈವೀ ಸಂದೇಶವೊಂದು ಬಂದಿತ್ತೆಂಬ ಒಂದೇ ಕಾರಣಕ್ಕೆ  ಇತ್ತೀಚೆಗೆ ಸುರಿದಿದ್ದ  ಭಾರೀ ಮಳೆಯಿಂದಾಗಿ ತುಂಬಿದ್ದ 500 ವರ್ಷ ಹಳೆಯದಾದ ನೀರಿನ ಟ್ಯಾಂಕ್ ಒಂದರ ಗೇಟುಗಳನ್ನು ತೆರೆದು ನೀರನ್ನು ಹೊರಕ್ಕೆ ಹರಿಯಬಿಟ್ಟ ಘಟನೆಯೊಂದು  ಕೂಡ್ಲಿಗಿ ತಾಲೂಕಿನ ರಾಮದುರ್ಗಾ ಗ್ರಾಮದಲ್ಲಿ ನಡೆದಿದೆ.

ನೆರೆಯ ಗ್ರಾಮಗಳಲ್ಲಿ ನೀರಿಗೆ ತತ್ವಾರವಿದ್ದರೂ ಈ ಗ್ರಾಮದ ಟ್ಯಾಂಕಿನಲ್ಲಿ ನೀರು ತುಂಬಿದ್ದು ಸಂತಸದ ವಿಷಯವಾಗಿತ್ತು. ಇದೀಗ ಅಂಧಶ್ರದ್ಧೆ ಜನರು ಈ ಅಮೂಲ್ಯ ನೀರನ್ನು ಹೊರ ಚೆಲ್ಲುವಂತೆ ಮಾಡಿದೆ.

ಅಷ್ಟಕ್ಕೂ ಈ ಗ್ರಾಮದ ಹಿರಿಯರೊಬ್ಬರಿಗೆ ಬಂದ ದೈವೀ ಸಂದೇಶವೇನು ಗೊತ್ತೇ ? ಟ್ಯಾಂಕಿನ ನೀರನ್ನು ಹೊರಚೆಲ್ಲಿ ಅದನ್ನು ಬರಿದಾಗಿಸಿದರೆ ಗ್ರಾಮದಲ್ಲಿ ಉತ್ತಮ ಮಳೆಯಾಗುವುದಂತೆ. ಈ ಸಂದೇಶವನ್ನು ಈ ಗ್ರಾಮದ ಹಿರಿಯ ಇತರರಿಗೆ ಹೇಳಿದ್ದೇ ತಡ ಹಿಂದೆ ಮುಂದೆ ಯೋಚಿಸದೆ ಟ್ಯಾಂಕಿನ ಗೇಟುಗಳನ್ನು ತೆರೆದು ಬಿಟ್ಟಿದ್ದರು.

ಟ್ಯಾಂಕಿನ ನೀರು ಬಳಕೆದಾರ ರೈತರ ಯೂನಿಯನ್ನಿನ ಮಾಜಿ ಅಧ್ಯಕ್ಷ ಸೂರ್ಯ ಪಾಪಣ್ಣ ಅವರನ್ನು ಸಂಪರ್ಕಿಸಿದಾಗ ಟ್ಯಾಂಕಿನ ಗೇಟುಗಳನ್ನು ಯಾರು ತೆರೆದಿದ್ದಾರೆಂದೇ ತಮಗೆ ತಿಳಿಯದು ಎನ್ನುತ್ತಾರೆ. ಗ್ರಾಮಸ್ಥರೂ ಈ ವಿಚಾರದಲ್ಲಿ ತುಟಿಪಿಟಿಕ್ಕೆನ್ನುತ್ತಿಲ್ಲ. ದೈವೀ ಸಂದೇಶ ಪಡೆದ ಗ್ರಾಮದ ಹಿರಿಯ ವ್ಯಕ್ತಿ ಯಾರೆಂದೂ ಇನ್ನೂ ತಿಳಿದುಬಂದಿಲ್ಲ.

ಇನ್ನು ಕೆಲವರ ಪ್ರಕಾರ ಟ್ಯಾಂಕಿನ ನೀರು ಕಲುಷಿತವಾಗಿದ್ದರಿಂದ ಹಾಗೂ ಅದರಿಂದ ಜನರ ಆರೋಗ್ಯಕ್ಕೆ ತೊಂದರೆಯುಂಟಾಗಬಹುದೆಂಬ ಭಯದಿಂದ ಅದನ್ನು ಬಿಡುಗಡೆ ಮಾಡಲಾಯಿತಂತೆ.

ಈ ವಿಚಾರ ತಮಗೆ ಗೊತ್ತೇ ಇಲ್ಲ ಎಂದು ಕೂಡ್ಲಿಗಿ ತಹಸೀಲ್ದಾರ್ ಎಲ್ ಕೃಷ್ಣಮೂರ್ತಿ ಹೇಳುತ್ತಾರೆ. ಅಂಧಶ್ರದ್ಧೆಯನ್ನು ನಂಬಿ  ನೀರನ್ನು ಪೋಲು ಮಾಡದಂತೆಯೂ ಅವರು ಗ್ರಾಮಸ್ಥರನ್ನು ವಿನಂತಿಸಿದ್ದಾರೆ.