ಪಾತಕಿ ರಶೀದ್ ಮಲಬಾರಿ ಬೆಂಬಿಡದ ಪೊಲೀಸರು

ಬೆಳಗಾವಿ : ಭೂಗತ ಪಾತಕಿ ರಶೀದ್ ಮಲಬಾರಿ ಬೆನ್ನು ಹಿಡಿದಿರುವ ಬೆಳಗಾವಿ ಪೊಲೀಸರು ಆತನು ಸಹಚರರ ಜೊತೆಗೆ ಸೇರಿ ನಡೆಸಿದ ಇನ್ನಷ್ಟು ಕ್ರಿಮಿನಲ್ ಕೃತ್ಯಗಳ ಜಾಲ ಬೇಧಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಪೊಲೀಸರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ತೀವ್ರ ತನಿಖೆಯಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ ಕೆಲವು ಸುಳಿವು ಲಭ್ಯವಾಗಿದೆ. ಮಲಬಾರಿ ಸಹಚರರಿಂದ ಹತ್ಯೆಗೊಳಗಾಗಿದ್ದ ಉದ್ಯಮಿ ರೋಹನ್ ರೇಡೇಕರ್ ಮೃತದೇಹ ಪತ್ತೆಯಾದ ಚೋರ್ಲಾಘಾಟ್ ಪ್ರದೇಶದಿಂದ ಕೆಲವು ದಿನಗಳ ಹಿಂದೆ ಪೊಲೀಸರು ಒಂದು ಜೊತೆ ಜೀನ್ಸ್ ಮತ್ತು ಗುರುತುಪತ್ರವನ್ನು ವಶಕ್ಕೆ ಪಡೆದುಕೊಂಡಿದ್ದರು.

ಕಂಪ್ಯೂಟರ್ ಹ್ಯಾಕರ್ ಆಶೀಸ್ ರಂಜನ್ ಕೊಲೆಕೃತ್ಯಕ್ಕೆ ಸಂಬಂಧಿಸಿದಂತೆ ಕಾರವಾರ ಪೊಲೀಸರು ಮಲಬಾರಿಯ ಕನಿಷ್ಟ 10 ಮಂದಿ ಸಹಚರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಶೀಸ್ ರಂಜನ್ ಮೃತದೇಹ ಅಂಕೋಲಾದಲ್ಲಿ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈತನನ್ನ ಮಲಬಾರಿ ಸಹಚರರು ಕಿಡ್ನಾಪ್ ಮಾಡಿ ಹತ್ಯೆಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಲಬಾರಿಗೆ ನೆರವು ನೀಡಿದ ಗಣ್ಯರ ವಿರುದ್ಧವೂ ತನಿಖೆ ತೀವ್ರವಾಗಿದೆ. ಮಲಬಾರಿ ಮಂಗಳೂರು ಪೊಲೀಸರಿಗೂ ಬೇಕಾಗಿದ್ದಾನೆ.