ಇಂದು ತೆರೆಯ ಮೇಲೆ `ಬೇಗಂ ಜಾನ್’

ವಿದ್ಯಾ ಬಾಲನ್ — ಈ ನಟಿ ಆರಿಸಿಕೊಳ್ಳುವ ಚಿತ್ರಗಳೇ ವಿಭಿನ್ನವಾದುದು. ಇವಳೊಬ್ಬಳು ಹತ್ತರಲ್ಲಿ ಒಬ್ಬಳು ನಟಿಯಂತೂ ಅಲ್ಲ. ಕೆಲವು ಚಿತ್ರಗಳಲ್ಲಿ ನಟಿಸಲು ವಿದ್ಯಾಗೆ ಮಾತ್ರ ಸಾಧ್ಯ. ಅಂತಹ ಪಾತ್ರಗಳಲ್ಲಿ ಬೇರೆಯವರನ್ನು ಊಹಿಸುವುದೂ ಕಷ್ಟ. `ಡರ್ಟಿ ಪಿಕ್ಚರ್’ನಲ್ಲಿ ಸೆಕ್ಸ್ ಸಿಂಬಲ್ ಸಿಲ್ಕ್ ಸ್ಮಿತಾ ರೋಲಿನಲ್ಲಿ ಮನೋಜ್ಞ ನಟನೆ ನೀಡಿ ಹಲವಾರು ಪ್ರಶಸ್ತಿ ಜೊತೆ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿರುವ ವಿದ್ಯಾ `ಕಹಾನಿ’ಯಲ್ಲಿ ಗರ್ಭಿಣಿಯಾಗಿ ನಟಿಸಿ ಫಿಲ್ಮ್ ಫೇರ್ ಸಮೇತ ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಳು.  ಇದಲ್ಲದೇ ವಿದ್ಯಾ ನಟಿಸಿರುವ ಹೆಚ್ಚಿನ ಪಾತ್ರಗಳಿಗೆ ಅವಾರ್ಡ್ ಸಿಕ್ಕಿದೆ. ವಿದ್ಯಾ ನಟನೆಯ ಬಹುನಿರೀಕ್ಷೆಯ `ಬೇಗಂ ಜಾನ್’ ಇಂದು ತೆರೆ ಕಾಣುತ್ತಿದೆ.

ಹೆಚ್ಚಾಗಿ ಮಹಿಳಾಪ್ರಧಾನ ಚಿತ್ರಗಳಲ್ಲಿಯೇ ನಟಿಸಿರುವ ವಿದ್ಯಾ `ಬೇಗಂ ಜಾನ್’ ಚಿತ್ರದಲ್ಲೂ ಅವಳದೇ ಟೈಟಲ್ ರೋಲ್. ಭಾರತ-ಪಾಕಿಸ್ತಾನ ವಿಭಜನೆಯ ಸಮಯದ ಸಿನಿಮಾ ಕತೆ ಇದಾಗಿದ್ದು ಇದರಲ್ಲಿ ವಿದ್ಯಾ ವೇಶ್ಯಾಗೃಹವೊಂದರ ಮಾಲಕಿ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವೇಶ್ಯೆಯರಾದ ಹೆಣ್ಣುಮಕ್ಕಳ ನೋವಿನ ಕತೆ ಚಿತ್ರದಲ್ಲಿದೆ. ಆದರೂ ತಮ್ಮ ಹಕ್ಕಿಗಾಗಿ ಹೋರಾಡುವ ಛಲಗಾತಿ ಮಹಿಳೆಯರ ಸ್ವಾಭಿಮಾನದ ಎಳೆ ಇದರಲ್ಲಿದೆ. ಈ ಸಿನಿಮಾ ಬೆಂಗಾಲಿ ಚಿತ್ರದ ರಿಮೇಕ್ ಆಗಿದ್ದು ಇದನ್ನು ಶ್ರೀಜಿತ್ ಮುಖರ್ಜಿ ನಿರ್ದೇಶೀಸಿದ್ದಾರೆ. ಸಿನಿಮಾದಲ್ಲಿ ನಾಸಿರುದ್ದೀನ್ ಶಾ, ಚುಂಕಿ ಪಾಂಡೆ, ಗೌಹಾರ್ ಖಾನ್, ಪಲ್ಲವಿ ಶಾರ್ದಾ ಮೊದಲಾದವರಿದ್ದಾರೆ.