ನಗರದಲ್ಲಿ ಬಿಯರ್, ಲಿಕ್ಕರ್ ಮಾರಾಟ ಗಣನೀಯ ಕುಸಿತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ನ 8ರಂದು 500 ಮತ್ತು 1000 ರೂ ನೋಟನ್ನು ಅಮಾನ್ಯ ಮಾಡಿದ ಬಳಿಕ ಕರಾವಳಿಯ ಅದರಲ್ಲೂ ನಗರದ ಪಾನಪ್ರಿಯರು ಕಂಗೆಟ್ಟುಹೋಗಿದ್ದಾರೆ. ಗ್ರಾಹಕರ ಖರೀದಿ ಶಕ್ತಿ ಕುಂದಿದ್ದು, ಇದು ಮದ್ಯದಂಗಡಿಗಳ ಆದಾಯದ ಮೇಲೂ ಹೊಡೆತ ನೀಡಿದೆ. ಪ್ರಸ್ತುತ ದೊರಕಿರುವ ಅಂಕಿ ಅಂಶಗಳ ಆಧಾರಲ್ಲಿ ಬಿಯರ್ ಶೇ 9.37 ಹಾಗೂ ಮದ್ಯ ಮಾರಾಟದಲ್ಲಿ ಶೇ 2.75 ಕುಸಿತ ಕಂಡಿದೆ. ನ 9ರಿಂದ 19ರವರೆಗೆ ದಾಖಲಾಗಿರುವ ಅಂಕಿ ಅಂಶಗಳಿವು. ಪ್ರತಿನಿತ್ಯದ ಮಾರಾಟದಲ್ಲಿ ಶೇ 50ರಷ್ಟು ಕುಸಿತವಾಗಿದೆ.

ಅತ್ಯಧಿಕವಾಗಿ ಚಿಲ್ಲರೆ ನಗದು ವಹಿವಾಟು ನಡೆಯುವ ಚಿಕ್ಕ ಮದ್ಯದಂಗಡಿಗಳಿಗೆ ಇದು ಬಹಳಷ್ಟು ಹೊಡೆತ ನೀಡಿದೆ. ಆದರೆ ದೊಡ್ಡ ದೊಡ್ಡ ಮದ್ಯದಂಗಡಿಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯ ಇರುವ ಕಾರಣ ಈ ಆರ್ಥಿಕ ಹೊಡೆತ ಅಷ್ಟೊಂದು ಕಾಡಿಲ್ಲ.

ಇದೇ ಅವಧಿಯಲ್ಲಿ ಕಳೆದ ವರ್ಷ 77,233 ಬಾಕ್ಸ್ ಮದ್ಯದ ಬಾಕ್ಸ್ ಮತ್ತು 63,256 ಬಿಯರ್ ಬಾಕ್ಸ್ ಮಾರಾಟವಾಗಿದ್ದವು. ಆದರೆ ಈ ವರ್ಷ 2,127 ಬಾಕ್ಸ್ ಲಿಕ್ಕರ್ ಮತ್ತು 5,928 ಬಾಕ್ಸ್ ಬಿಯರ್ ಮಾರಾಟವಾಗಿದೆ ಎಂದು ದಕ್ಷಿಣ ಕನ್ನಡ ಅಬಕಾರಿ ವಿಭಾಗದ ಹೆಚ್ಚುವರಿ ಕಮಿಷನರ್ ಎಲ್ ಎ ಮಂಜುನಾಥ್ ಹೇಳಿದ್ದಾರೆ.

ಆದರೆ ಪ್ರಸ್ತುತ ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಹೊಸ ವರ್ಷಾರಂಭದ ಸಂಭ್ರಮದಲ್ಲಿ ಜನತೆ ಹೆಚ್ಚು ಮದ್ಯ ಖರೀದಿಸುವ ಸಾಧ್ಯತೆ ಇದೆ ಎಂದವರು ಹೇಳಿದ್ದಾರೆ.

ಅಲ್ಲದೆ ಮರಳು ಸಾಗಾಟ ಸ್ಥಗಿತಗೊಂಡಿರುವುದು, ಕಟ್ಟಡ ಕಾಮಗಾರಿಗೆ ಹೊಡೆತ ಬಿದ್ದಿರುವುದು, ಒಳಸಮುದ್ರ ಮೀನುಗಾರಿಕೆ ಇಲ್ಲದಿರುವುದು, ರಬ್ಬರ್ ಟ್ಯಾಪಿಂಗ್ ಕೆಲಸವಿಲ್ಲದಿರುವುದು, ಶಬರಿಮಲೆ ಯಾತ್ರೆ ಆರಂಭಗೊಂಡಿರುವುದು ಹೀಗೆ ಹಲವು ವಿಚಾರಗಳಿಗಾಗಿಯೂ ಪಾನಪ್ರಿಯರು ಕುಡಿತದತ್ತ ಮುಖ ಮಾಡದಿರುವ ಕಾರಣ ಮದ್ಯಮಾರಾಟದಲ್ಲಿ ಗಣನೀಯ ಕುಸಿತವಾಗಿದೆ.