ಮೋದಿ ದತ್ತು ಪಡೆದ ಗ್ರಾಮದಲ್ಲಿ ಗೋಮಾಂಸ ಉದ್ಯಮಿ ಪಾರುಪತ್ಯ

ಮೋದಿಯ ದತ್ತು ಗ್ರಾಮದಲ್ಲಿ ಅಭಿವೃದ್ಧಿಯ ಸಂಚಾಲಕರಾಗಿರುವುದು ದೇಶದ ಅತಿ ದೊಡ್ಡ ಗೋಮಾಂಸ ರಫ್ತು ಉದ್ಯಮಿಯಾಗಿರುವುದು ವಿಡಂಬನೆಯಷ್ಟೆ.

 

2014ರ ನವಂಬರ್ 7ರಂದು ಪ್ರಧಾನಿ ನರೇಂದ್ರ ಮೋದಿ ಜಯಪುರ ಗ್ರಾಮವನ್ನು ಸಂಸದ್ ಆದರ್ಶ ಗ್ರಾಮ ಯೋಜನೆಯ ಅಡಿ ದತ್ತು ಪಡೆದಿದ್ದರು. ಮೋದಿಯ ಸ್ವಕ್ಷೇತ್ರ ವಾರಣಾಸಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಜಯಪುರ ಗ್ರಾಮದಲ್ಲಿ 2011ರ ಜನಗಣತಿಯ ಪ್ರಕಾರ 2974 ಜನರಿದ್ದಾರೆ. ಏಪ್ರಿಲ್ 2014ರಲ್ಲಿ ವಿದ್ಯುತ್ ಕಂಬವೊಂದು ಮೇಲೆ ಬಿದ್ದು ಗಾಯಗೊಂಡವರನ್ನು ನಗರಕ್ಕೆ ಸಾಗಿಸಲು ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಈ ಗ್ರಾಮವನ್ನು ದತ್ತು ಪಡೆದು ಹೊಸ ಜಯಪುರವನ್ನು ನಿರ್ಮಿಸಲು ನಿರ್ಧರಿಸಿದ್ದರು. ಕೂಡಲೇ ಜಯಪುರ ಗ್ರಾಮ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. 2015ರ ವೇಳೆಗೆ ಜಯಪುರ ಗ್ರಾಮ ಅಭಿವೃದ್ಧಿಯ ಉತ್ತುಂಗವನ್ನು ಕಂಡಿತ್ತು. ಮಾಧ್ಯಮಗಳಲ್ಲಿ ಜಯಪುರ ಗ್ರಾಮದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ವರದಿಗಳು ಪ್ರಕಟವಾಗಿದ್ದವು. 2016ರ ವೇಳೆಗೆ ಗ್ರಾಮದಲ್ಲಿ ಎರಡು ಬ್ಯಾಂಕುಗಳು ತೆರೆದಿದ್ದವು. ಸೋಲಾರ್ ಚಾಲಿತ ಬೀದಿದೀಪಗಳು, ಎರಡು ಎಟಿಎಂ ಮತ್ತು ಸೋಲಾರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಅಭಿವೃದ್ಧಿಯ ರಭಸ ಕೊಂಚ ಕಡಿಮೆಯಾಗುತ್ತಿದ್ದಂತೆ ಕಾಣುತ್ತಿದೆ.

ಗ್ರಾಮದಲ್ಲಿ ಕೈಗೊಳ್ಳಲಾದ ಮೂಲ ಸೌಕರ್ಯಗಳ ಅನೇಕ ಯೋಜನೆಗಳನ್ನು ಅವಸರದಲ್ಲಿ ಕೈಗೊಳ್ಳಲಾಗಿದ್ದು ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸೌಹಾರ್ದತೆ ಇಲ್ಲದೆಯೇ ಕಾಮಗಾರಿ ನಡೆದಿದೆ. ಸಂಸದ ಆದರ್ಶ ಗ್ರಾಮ ಯೋಜನೆಯಡಿ ಸ್ವತಃ ಮೋದಿ ತಮ್ಮ ನಿಧಿಯಿಂದ  5 ಕೋಟಿ ರೂ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಅನೇಕ ಖಾಸಗಿ ಉದ್ಯಮಿಗಳು ಈ ಗ್ರಾಮದಲ್ಲಿ ಅಭಿವೃದ್ಧಿ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಪ್ರಮುಖ ಉದ್ಯಮಿಗಳ ಪೈಕಿ ಮುಂಬಯಿಯಲ್ಲಿರುವ ಅಲ್ಲನಾಸನ್ಸ್ ಕಂಪನಿ ಮುಂಚೂಣಿಯಲ್ಲಿದ್ದು ಈ ಉದ್ದಿಮೆ ದೇಶದ ಅತಿ ದೊಡ್ಡ ಹಲಾಲ್ ಎಮ್ಮೆ ಮಾಂಸವನ್ನು ರಫ್ತು ಮಾಡುವ ಸಂಸ್ಥೆಯಾಗಿದೆ. 70 ದೇಶಗಳಿಗೆ ಎಮ್ಮೆ ಮಾಂಸವನ್ನು ರಫ್ತು ಮಾಡುವ ಅಲನಾಸನ್ಸ್ ಕಂಪನಿ ಉತ್ತಮ ಮಾರುಕಟ್ಟೆಯನ್ನೂ ಹೊಂದಿದೆ.

2014ರ ಚುನಾವಣೆಗಳಿಗೂ ಮುನ್ನ ಪ್ರಧಾನಿ ಮೋದಿ ತಮ್ಮ ಭಾಷಣಗಳಲ್ಲಿ ಗೋಮಾಂಸ ಮಾರಾಟವನ್ನು ಕಟುವಾಗಿ ಖಂಡಿಸುತ್ತಿದ್ದರು. ಗೋಮಾಂಸದ ಬಣ್ಣ ಪಿಂಕ್ ಇರುವುದರಿಂದ ಪಿಂಕ್ ಕ್ರಾಂತಿ ಎಂದು ಲೇವಡಿ ಮಾಡುತ್ತಿದ್ದರು. ಕಸಾಯಿಖಾನೆಗಳನ್ನು ಉತ್ತೇಜಿಸುವ ಯುಪಿಎ ಸರ್ಕಾರದ ನೀತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಯಾದವ ಕುಲಕ್ಕೆ ಸೇರಿದವರಾಗಿದ್ದೂ ತಮ್ಮ ಪಾರಂಪರಿಕ ಗೋ ಪಾಲನೆಯನ್ನು ಕೈಬಿಟ್ಟು ಗೋಮಾಂಸ ವ್ಯಾಪಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಮುಲಾಯಂ ಸಿಂಗ್ ಮತ್ತು ಲಲ್ಲೂ ಪ್ರಸಾದ್ ಅವರನ್ನು ಮೊದಿ ಗೇಲಿ ಮಾಡುತ್ತಿದ್ದುದೂ ಉಂಟು. ತಮ್ಮ ಅನೇಕ ಭಾಷಣಗಳಲ್ಲಿ ಗೋಮಾಂಸ ರಫ್ತುಮಾಡುವುದನ್ನು ಖಂಡಿಸುತ್ತಿದ್ದ ಮೋದಿ, 2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಭಾರತ ಆ ವರ್ಷ ಅತಿಹೆಚ್ಚು ಗೋಮಾಂಸ ರಫ್ತು ಮಾಡಿದ ದೇಶ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದನ್ನು ಕಟುವಾಗಿ ವಿರೋಧಿಸಿದ್ದರು. ಈ ವಿದ್ಯಮಾನದ ಬಗ್ಗೆ ಮೌನ ವಹಿಸಿದ್ದ ಜನರನ್ನು ಹೋರಾಟಕ್ಕೆ ಪ್ರಚೋದಿಸುವಂತೆ ಭಾಷಣ ಮಾಡಿದ್ದರು. ಆದರೆ ಇಂದು ತಮ್ಮದೇ ದತ್ತು ಗ್ರಾಮದಲ್ಲಿ ಅಭಿವೃದ್ಧಿಯ ಸಂಚಾಲಕರಾಗಿರುವುದು ದೇಶದ ಅತಿ ದೊಡ್ಡ ಗೋಮಾಂಸ ರಫ್ತು ಉದ್ಯಮಿಯಾಗಿರುವುದು ವಿಡಂಬನೆಯಷ್ಟೆ.