ಹೆಜ್ಜೇನು ದಾಳಿ : ವೃದ್ಧೆ ಸಾವು

ಮೂವರು ಗಂಭೀರ, ಆಸ್ಪತ್ರೆಗೆ ದಾಖಲು

ಮಂಗಳೂರು : ನಗರದ ಹೊರವಲಯದ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಾರು ಲಕ್ಷ್ಮೀಗುಡ್ಡೆ ಎಂಬಲ್ಲಿ ಉಳಾಯಿಬೆಟ್ಟು ನಿವಾಸಿ ಕಮಲಾ (65) ಎಂಬ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ ಹೆಜ್ಜೇನು ಕಡಿತಕ್ಕೆ ಅವರು ಸಾವನ್ನಪ್ಪಿದ್ದಾರೆ.

ಹೆಜ್ಜೇನು ಕಡಿತಕ್ಕೆ ಶ್ರೀಧರ್ (49) ಪತ್ನಿ ಲೀಲಾವತಿ (45) ಮತ್ತು ತಾಯಿ ಜಾನಕಿ (70) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಕ್ಷ್ಮೀಗುಡ್ಡೆಯಲ್ಲಿರುವ ಶ್ರೀಧರ್ ಅವರ ಅತ್ತೆ ಕಮಲಾ ಅವರು ಎರಡು ದಿನಗಳ ಹಿಂದೆ ಪುತ್ರಿ ಮನೆಗೆ ಬಂದಿದ್ದರು. ನಿನ್ನೆ ಮಧ್ಯಾಹ್ನದ ವೇಳೆ ಮನೆ ಸಮೀಪದ ಕಾಡಿಗೆ ಕಟ್ಟಿಗೆ ತರಲೆಂದು ಶ್ರೀಧರ್ ಅವರ ತಾಯಿ ಜಾನಕಿ ಹೋಗಿದ್ದರು. ಕಮಲಾ ಕೂಡಾ ಅವರ ಜೊತೆಗೆ ಹೋಗಿದ್ದರು. ಕಟ್ಟಿಗೆಗಾಗಿ ಅಲ್ಲಿ ಹುಡುಕಾಡುತ್ತಿದ್ದಾಗ, ಹೆಜ್ಜೇನಿನ ಹಿಂಡಿಗೆ ಇವರು ಕೈ ಹಾಕಿದ್ದಾರೆ ಎನ್ನಲಾಗಿದ್ದು, ಹೆಜ್ಜೇನುಗಳು ಇವರ ಮೇಲೆ ದಾಳಿ ಮಾಡಿವೆ.

ಇವರನ್ನು ಬೆನ್ನಟ್ಟಿಕೊಂಡು ಬಂದ ಹೆಜ್ಜೇನುಗಳು ಸಿಕ್ಕಸಿಕ್ಕಲ್ಲಿ ಕಚ್ಚಿವೆ. ಇವರ ಬೊಬ್ಬೆ ಕೇಳಿ ಓಡಿ ಬಂದ ಜಾನಕಿ ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಶ್ರೀಧರ್, ಲೀಲಾವತಿ ದಂಪತಿ ಕೂಡಾ ಬಂದಿದ್ದಾರೆ. ಈ ವೇಳೆ ಎಲ್ಲರ ಮೇಲೂ ಹೆಜ್ಜೇನುಗಳು ದಾಳಿ ಮಾಡಿವೆ.

ಗಂಭೀರ ಗಾಯಗೊಂಡ ಕಮಲಾ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು.

ಶ್ರೀಧರ್, ಜಾನಕಿ, ಲೀಲಾವತಿ ಇದೀಗ ಚೇತರಿಸಿಕೊಂಡಿದ್ದಾರೆ. ಹೆಜ್ಜೇನು ದಾಳಿ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.