ರಾತ್ರಿ ವೇಳೆ ಪೊಲೀಸರು ಏಕಾಂಗಿ ಗಸ್ತು ತಿರುಗದಂತೆ ಮುನ್ನೆಚ್ಚರಿಕೆ

ಮಾವೋವಾದಿ ಆಕ್ರಮಣ ಸಾಧ್ಯತೆ

ಕಾಸರಗೋಡು : ಮಲಪ್ಪುರ ಜಿಲ್ಲೆಯ ನಿಲಾಂಬೂರಿನ ದಟ್ಟಾರಣ್ಯದಲ್ಲಿ ಸಿಪಿಐ ಮಾವೊವಾದಿ ಕೇಂದ್ರ ಸಮಿತಿ ಸದಸ್ಯ ಕುಪ್ಪು ಸ್ವಾಮಿ ಅಲಿಯಾಸ್ ಕುಪ್ಪು ದೇವರಾಜ್ (60) ಮತ್ತು ಆ ಸಂಘಟನೆಯ ತಮಿಳುನಾಡು ರಾಜ್ಯ ಸಮಿತಿ ಸದಸ್ಯೆ ಅಜಿತ ಯಾನೆ ಕಾವೇರಿ (43)ಎಂಬವರು ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಮಾವೋವಾದಿಗಳು ಯಾವುದೇ ಕ್ಷಣದಲ್ಲಿ  ಪ್ರತೀಕಾರ ತೀರಿಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮಾವೋವಾದಿ ಬೆದರಿಕೆ ಉಂಟಾಗಿರುವ ಜಿಲ್ಲೆಗಳ ಪೊಲೀಸರು ರಾತ್ರಿ ವೇಳೆ ಏಕಾಂಗಿಯಾಗಿ ಗಸ್ತು ತಿರುಗಬಾರದೆಂದೂ ಎಸ್ಸೈ ಹಾಗೂ ಎಎಸ್ಸೈಗಳನ್ನೊಳಗೊಂಡ ತಂಡದೊಂದಿಗೆ ಮಾತ್ರವೇ ರಾತ್ರಿ ವೇಳೆ ಗಸ್ತು ತಿರುಗಬೇಕೆಂದೂ, ಈ ಸಂದರ್ಭ ಪೊಲೀಸರು   ಬಂದೂಕು ಹೊಂದಿರಬೇಕೆಂದು ಉನ್ನತ ಪೊಲೀಸ್ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.ಕಾಸರಗೋಡು ಜಿಲ್ಲೆಯಲ್ಲಿ ಆದೂರು, ಬೇಡಗ, ಬದಿಯಡ್ಕ, ರಾಜಪುರಂ, ವೆಳ್ಳರಿಕುಂಡ್, ಚೀಮೇನಿ, ಅಂಬಲತ್ತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ದಟ್ಟಾರಣ್ಯಗಳಿದ್ದು ಆ  ಮೂಲಕ ಕರ್ನಾಟಕದ ಅರಣ್ಯಗಳಿಂದ ಮಾವೋವಾದಿಗಳು ನುಸುಳಿ ಬಂದು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ  ಮುನ್ನೆಚ್ಚರಿಕೆ  ನೀಡಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳು ಮತ್ತು ಅವುಗಳ ವ್ಯಾಪ್ತಿಗೊಳಪಟ್ಟ ಅರಣ್ಯ ಪ್ರದೇಶಗಳಲ್ಲಿ ಪೊಲೀಸರು  ತೀವ್ರ ಕಟ್ಟೆಚ್ಚರ ಪಾಲಿಸತೊಡಗಿದ್ದಾರೆ. ಕಣ್ಣೂರು, ಪಾಲ್ಘಾಟ್, ವಯನಾಡು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇದೇ ರೀತಿ ಜಾಗ್ರತೆ ಪಾಲಿಸಲಾಗುತ್ತಿದೆ. ಕಣ್ಣೂರು ಜಿಲ್ಲೆಯ ಪ್ರದೇಶಗಳಲ್ಲಿ ಮಾವೋವಾದಿಗಳು ಕಾರ್ಯಾಚರಿಸುತ್ತಿದ್ದಾರೆ ಎಂಬುದನ್ನು ಈ ಹಿಂದೆಯೇ ಪತ್ತೆ ಹಚ್ಚಲಾಗಿತ್ತು.

ನಿಲಾಂಬೂರಿನಲ್ಲಿ  ಪೊಲೀಸ್ ಮತ್ತು ಮಾವೋವಾದಿಗಳ ಮಧ್ಯೆ ನಡೆದ ಗುಂಡಿನ ಚಕಮಕಿ ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚಿಗೆ ಹಸ್ತಾಂತರಿಸಲಾಗಿದೆ. ಇದಕ್ಕಾಗಿ ಕ್ರೈಮ್ ಬ್ರಾಂಚಿನವಿಶೇಷ ತಂಡಕ್ಕೂ ರೂಪು ನೀಡಲಾಗಿದೆ.

ಜಸ್ಟೀಸ್ ಲೋಧಾ ಆಯೋಗ ಮಾಡಿದ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ತಿರುವನಂತಪುರದಲ್ಲಿ ಹೋಟೆಲೊಂದರ ಶೌಚಾಲಯದಲ್ಲಿ ಮಾವೋವಾದಿಗಳು ಲಗತ್ತಿಸಿರುವುದಾಗಿ ಸಂಶಯಿಸಲಾದ ಭಿತ್ತಿಪತ್ರ ಕಂಡುಬಂದಿದ್ದು, ಅದರಲ್ಲಿ ಪ್ರತೀಕಾರ ತೀರಿಸುವುದಾಗಿ ಮುನ್ನೆಚ್ಚರಿಕೆ ನೀಡಲಾಗಿದೆ. ನಿಲಾಂಬೂರಿನಲ್ಲಿ ಮಾವೋವಾದಿಗಳನ್ನು ಸದೆಬಡಿದ ಘಟನೆಗೆ ಸಂಬಂಧಿಸಿ ಈ ಭಿತ್ತಿಪತ್ರ ಲಗತ್ತಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.