ವಂಚಕ ನಕಲಿ ಜ್ಯೋತಿಷಿಗಳ ಬಗ್ಗೆ ಇರಲಿ ಎಚ್ಚರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಮಂದಿ ಜ್ಯೋತಿಷಿಗಳ ಸೋಗಿನಲ್ಲಿ ಜನಸಾಮಾನ್ಯರನ್ನು ವಂಚಿಸುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಆದರೆ ಮೋಸ ಹೋದವರು ಯಾರೂ ಕೂಡಾ ದೂರು ನೀಡಲು ಮುಂದೆ ಬಾರದಿರುವುದು ಸಮಸ್ಯೆ ಸೃಷ್ಟಿಸಿದೆ.

ನಗರದಲ್ಲಿ `ಖ್ಯಾತ ಜ್ಯೋತಿಷಿಗಳು’ ಎಂಬ ಬೋರ್ಡ್ ಹಾಕಿಕೊಂಡು ಅದೆಷ್ಟೋ ವಂಚಕರು  ಕಮಾಯಿ ಮಾಡುತ್ತಿದ್ದಾರೆ. ನಗರದ ಜನನಿಬಿಡ ಪ್ರದೇಶಗಳಲ್ಲಿ, ಪ್ಲ್ಯಾಟುಗಳಲ್ಲಿ ಜ್ಯೋತಿಷಿ ಪುದುವಾಳ್, ಭಟ್, ಪಂಡಿತ, ನಂಬಿಯಾರ್… ಹೀಗೆ ಏನಾದರೊಂದು  ಬೋರ್ಡ್ ನೇತಾಡಿಸಿಕೊಂಡು ಅಮಾಯಕ ಮಂದಿಯನ್ನು ವಂಚಿಸುವ ನಕಲಿ ಜ್ಯೋತಿಷಿಗಳು ಸಾಕಷ್ಟು ಮಂದಿ ಇದ್ದಾರೆ. ಮನಶಾಂತಿ ಬೇಕೆಂದೋ ಅಥವಾ ಒಮ್ಮೆ ತಮ್ಮ ಸಂಕಷ್ಟ ಪರಿಹಾರವಾದರೆ ಸಾಕು ಎಂದು ಅಲ್ಪಸ್ವಲ್ಪ ದುಡ್ಡು ಹಿಡಿದುಕೊಂಡು ಇಂತಹ ಜ್ಯೋತಿಷಿಗಳ ಬಳಿಗೆ ಬರುವ ಮಂದಿ ಬಳಿಕ ಎಲ್ಲವನ್ನೂ ಕಳೆದುಕೊಂಡು, ಮನೆಮಠ ಮಾರಾಟಕ್ಕೆ ಮುಂದಾದ ಘಟನೆಗಳೂ ಇವೆ.

ನಗರದಲ್ಲಿ ಈ ಹಿಂದೆ ಬೆಳಕಿಗೆ ಬಂದಿರುವ ಒಂದೆರಡು ಜ್ಯೋತಿಷಿಗಳ ವಂಚನೆ ಪ್ರಕರಣ ಬಿಟ್ಟರೆ ಇನ್ನು ಸಾಲು ಸಾಲು ಪ್ರಕರಣಗಳು ಯಾವುದೂ ಬೆಳಕಿಗೆ ಬಂದಿಲ್ಲ. ವಿಚಾರವಾದಿ ನರೇಂದ್ರ ನಾಯಕ್ ಅವರು ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಕರೆದುಕೊಂಡು ನಡೆಸಿದ ಸ್ಟಿಂಗ್ ಆಪರೇಶನ್ನಿನಲ್ಲಿ ಸಿಕ್ಕಿ ಬಿದ್ದ ನಕಲಿ ಶರ್ಮಾ ಪ್ರಕರಣ ಮತ್ತು ಬೆಳ್ತಂಗಡಿ ನಕಲಿ ಗುರೂಜಿ ಪ್ರಕರಣ ಬಿಟ್ಟರೆ ಇನ್ಯಾರೂ ಕೂಡಾ ಇಂತಹ ನಕಲಿ ಜ್ಯೋತಿಷಿಗಳ ಬಗ್ಗೆ ದೂರು ಕೊಟ್ಟ ಉದಾಹರಣೆಗಳಿಲ್ಲ. ಹೀಗಿದ್ದರೂ ನಗರದಲ್ಲಿ ಸಾಕಷ್ಟು ಮಂದಿ ನಕಲಿ ಜ್ಯೋತಿಷಿಗಳಿದ್ದಾರೆ ಎನ್ನುವುದು ಪೊಲೀಸರ ಸಹಿತ ಎಲ್ಲರಿಗೂ ಗೊತ್ತಿದೆ. ಜ್ಯೋತಿಷಿ ಶರ್ಮಾ ಬಂಧನದ ಬಳಿಕ ಹಲವು ಮಂದಿ ವಿಚಾರವಾದಿ ನರೇಂದ್ರ ನಾಯಕರಿಗೆ ಕರೆ ಮಾಡಿ ತಾವು ಮೋಸ ಹೋಗಿರುವ ವಿಚಾರವನ್ನು ತಿಳಿಸಿದ್ದರು. ಆದರೆ ಯಾರೂ ಕೂಡಾ ಬಹಿರಂಗವಾಗಿ ತಾವು ಮೋಸ ಹೋಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ !

ಇನ್ನು ಪೊಲೀಸರು ಕೂಡಾ ಬಂಧಿತ ಶರ್ಮನ ಬಗ್ಗೆ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಆರೋಪಿ ಶರ್ಮಾ ತನ್ನೂರಿಗೆ ಪಲಾಯನ ಮಾಡಿ ಅಲ್ಲಿ ಕೆಲವರಿಗೆ ಟೋಪಿ ಇಡುವ ಯತ್ನ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

ಎಸ್ಪಿ ಭರವಸೆ

 ಜಿಲ್ಲೆಯಲ್ಲಿ ಜೋತಿಷಿಗಳ ಸೋಗಿನಲ್ಲಿ ಜನಸಾಮಾನ್ಯರನ್ನು ವಂಚಿಸುತ್ತಿರುವ ದೂರುಗಳು ದಾಖಲಾದರೆ, ಇಂತಹವರÀ ವಿರುದ್ಧ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ ಎಂದು ಎಸ್ಪಿ ಗುಲಾಬ್ ರಾವ್ ಬೊರಸೆ ಇದೀಗ ಭರವಸೆ ಕೊಟ್ಟಿರುವುದು ಸಮಾಧಾನಕರ ಸಂಗತಿ.

ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಜ್ಯೋತಿಷಿ ವಿರುದ್ಧ ಎಫ್ ಐ ಆರ್ ದಾಖಲು ಮಾಡುವಂತೆ ಸಂಬಂಧಪಟ್ಟ ಠಾಣಾ ಪೊಲೀಸ್ ಅಧಿಕಾರಿಗೆ ತಿಳಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಹೆಸರಿನಲ್ಲಿ ವಂಚಿಸುವ ಜಾಲದ ವಿರುದ್ಧ ಕಾನೂನು ಸಮರದ ಜೊತೆಗೆ, ಇಂತಹ ಜೋತಿಷಿಗಳ ಬಗ್ಗೆ ನಿಗಾ ಇರಿಸಲಾಗುವುದು ಎಂದು ಎಸ್ಪಿ ಹೇಳಿದ್ದಾರೆ. ಆದರೆ ಅದೇನು ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ.

ನಕಲಿ ಶರ್ಮಾ ಮತ್ತು ಬೆಳ್ತಂಗಡಿಯ ಗುರೂಜಿ ಪ್ರಕರಣದ ಬಳಿಕವಾದರೂ ಇಂತಹ ನಕಲಿ ಜ್ಯೋತಿಷಿಗಳ ಬಗ್ಗೆ ಜನರಲ್ಲಿ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ.