ಡಿಜಿಟಲ್ ಸರ್ವಾಧಿಕಾರ ಬಗ್ಗೆ ಎಚ್ಚರವಿರಲಿ

 ಡಿಜಿಟಲ್ ಪ್ರಪಂಚ ವಿಶ್ವದ ಶೇ 1ರಷ್ಟು ಜನರ ಕೋಟ್ಯಧಿಪತಿಗಳ ಕೂಟವನ್ನು ಸೃಷ್ಟಿಸಿದೆ.

  • ವಂದನಾ ಶಿವ

2017ರ ಹೊಸ ವರ್ಷ ಅರಂಭವಾಗಿದ್ದು ಭಾರತ ಒಂದೇ ರಾತ್ರಿಯಲ್ಲಿ ನಗದು ಆರ್ಥಿಕತೆಯನ್ನು ತೊರೆದು ನಗದುರಹಿತ ಡಿಜಿಟಲ್ ಆರ್ಥಿಕತೆಯಾಗಲು ದಾಪುಗಾಲು ಹಾಕುತ್ತಿದೆ. ಡಿಜಿಟಲ್  ಅರ್ಥಿಕತೆ ಎಂದರೇನು, ಇದನ್ನು ನಿಯಂತ್ರಿಸುವವರು ಯಾರು ಎಂದು ಅರಿಯುವುದು ಮಾತ್ರವೇ ಅಲ್ಲದೆ  ನಮ್ಮ ಜೀವನವನ್ನು ಮತ್ತು ಸ್ವಾತಂತ್ರ್ಯವನ್ನು ನಿಯಂತ್ರಿಸುತ್ತಿರುವ ಹಣ ಮತ್ತು ತಂತ್ರಜ್ಞಾನವನ್ನು ಕುರಿತು ಅರಿಯುವ ಅವಶ್ಯಕತೆ ಇಂದು ಹೆಚ್ಚಾಗಿದೆ. ಈ ಕಾಲಯುಗದಲ್ಲಿ ಯಾವುದೇ ದುಡಿಮೆ ಮಾಡದೆ ಬಾಡಿಗೆ ಸಂಗ್ರಹಿಸುವ ಸಟ್ಟಾ ಬಜಾರಿನ ದಲ್ಲಾಳಿಗಳು ಅತ್ಯಂತ ಶ್ರೀಮಂತರಾಗಿ ಹೊರಹೊಮ್ಮುತ್ತಿದ್ದಾರೆ.  ಮತ್ತೊಂದೆಡೆ ಬೆವರು ಸುರಿಸಿ ದುಡಿಯುವ ಶ್ರಮಿಕರು, ರೈತರು, ನೌಕರರು ಕೇವಲ ದಾರಿದ್ರ್ಯದ ಕೂಪಕ್ಕೆ ತಳ್ಳಲ್ಪಡುತ್ತಿರುವುದೇ ಅಲ್ಲದೆ ಅವರು ಪ್ರತಿನಿಧಿಸುವ ಸ್ವಸಂಘಟಿತ ಅರ್ಥ ವ್ಯವಸ್ಥೆಗೆ ಕಪ್ಪು ಮಸಿ ಬಳಿಯಲು ಯತ್ನಿಸಲಾಗುತ್ತಿದೆ.

ಡಿಜಿಟಲ್ ಆರ್ಥಿಕತೆಯ ನಾಗಾಲೋಟದಲ್ಲಿ ದೀರ್ಘ ಕಾಲಿಕ ಲಾಭಕ್ಕಾಗಿ ಅಲ್ಪ ಕಾಲಿಕ ನೋವು ಸಹಿಸುವ ಮಾತುಗಳು ಕೇಳಿಬರುತ್ತಿವೆ. ಆದರೆ ಈ ನೋವು ಅಲ್ಪಕಾಲಿಕವಲ್ಲ. ಹಲವಾರು ದಿನಗಳ ಕಾಲ ದುಡಿಯುವ ಮೂಲಕ ತನ್ನ ಜೀವವನ್ನೇ ಸವೆಸುತ್ತಿರುವ ಜನಸಾಮಾನ್ಯರು ಬ್ಯಾಂಕುಗಳ ಎದುರು, ಎಟಿಎಂಗಳ ಎದುರು ಬಸವಳಿದು ನಿಲ್ಲುತ್ತಿದ್ದಾರೆ. ಗ್ರಾಮಗಳಿಂದ ಬ್ಯಾಂಕಿಗೆ ಕಿಲೋಮೀಟರುಗಟ್ಟಲೆ ನಡೆಯುವುದು ಸಾಮಾನ್ಯ ಸಂಗತಿಯಾಗಿದೆ.

ಇದೇ ನೀತಿಯನ್ನು ಜಾರಿಗೊಳಿಸುತ್ತಿರುವ ವೆನೆಜುವೆಲಾದಲ್ಲಿ ದಂಗೆ ಏಳುತ್ತಿದೆ. ಆದರೆ ಭಾರತೀಯರು ತಾಳ್ಮೆಯಿಂದ ಸಾಲುಗಟ್ಟಿ ನಿಲ್ಲುತ್ತಲೇ ಇದ್ದಾರೆ. ಬಾರತದ ಆರ್ಥಿಕ ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸಲಾಗುತ್ತದೆ ಎಂಬ ಭ್ರಮೆ ಆವರಿಸಿದೆ.  ಈ ದೀರ್ಘ ಕಾಲಿಕ ಲಾಭ ಯಾರಿಗೆ ಲಭಿಸುತ್ತದೆ ಎಂಬ ಪ್ರಶ್ನೆ ಇಲ್ಲಿ ಗಹನವಾಗುತ್ತದೆ. ವಿಶ್ವದ ಮೊದಲ ಹತ್ತು ಶ್ರೀಮಂತರ ಕೋಟ್ಯಧಿಪತಿಗಳು ಪೇಟೆಂಟ್ ಮೂಲಕ ಮತ್ತು ಮಾಹಿತಿ ಸಾಧನಗಳ ಮೇಲೆ ಏಕಸ್ವಾಮ್ಯ ಸಾಧಿಸುವ ಮೂಲಕ ತಮ್ಮ ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ. ಬಿಲ್ ಗೇಟ್ಸ್ ಮತ್ತು ಕಂಪನಿ ಸಾಫ್ಟ್ ವೇರ್ ಪೇಟೆಂಟ್‍ಗಳ ಮೂಲಕ ಹಣ ಸಂಪಾದಿಸಿದೆ. ಸಾಫ್ಟವೇರ್ ಸೃಷ್ಟಿಸಿದ ಮೇಧಾವಿಗಳು ಕೇವಲ ಕಾರ್ಯಾಗಾರಕ್ಕೆ ಸೀಮಿತವಾಗಿದ್ದಾರೆ. ಆಲ್ಫಬೆಟ್ ಅಥವಾ ಗೂಗಲ್, ಫೇಸ್ಬುಬುಕ್, ಅಮೆಜಾನ್, ಆಪಲ್ ಮತ್ತು ಮೈಕ್ರೋಸಾಫ್ಟ್ ಈ ಎಲ್ಲ ಉದ್ಯಮಗಳ ಶೇರುಗಳನ್ನು ಬೆರಳೆಣಿಕೆಯಷ್ಟು ಖಾಸಗಿ ಬಂಡವಾಳ ಹೂಡಿಕೆದಾರರು ನಿಯಂತ್ರಿಸುತ್ತಿದ್ದಾರೆ. ಇದರ ನಾಯಕತ್ವವನ್ನು ವ್ಯಾನ್ ಗಾರ್ಡ್ ಇಂಕ್ ವಹಿಸಿದೆ. ಒಂದು ಪ್ರಾಮಾಣಿಕ ಅರ್ಥವ್ಯವಸ್ಥೆಯಲ್ಲಿ ಇದು ಅಕ್ರಮವಾಗುತ್ತದೆ. ಭಾರತದಲ್ಲಿ ಇದಕ್ಕೆ ನಾವೇ ಪಟ್ಟಾಭಿಷೇಕ ಮಾಡುತ್ತಿದ್ದೇವೆ.

ಫೇಸ್ಬುಕ್ ಒಡೆಯ ಜೂಕರಬರ್ಗ್ ಸಾಮಾಜಿಕ ಜಾಲತಾಣಗಳ ಮೇಲೆ ತನ್ನ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಫೇಸ್ಬುಕ್ 900 ದಶಲಕ್ಷ ಗ್ರಾಹಕರ ನಡುವೆ ನಡೆಯುವ ಎಲ್ಲ ಸಂವಹನ ಪ್ರಕ್ರಿಯೆಯನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಜೂಕ್ರಬರ್ಗ್ ಜನ ಸಾಮಾನ್ಯರ ಗೋಪ್ಯತೆಯನ್ನೂ ಲೆಕ್ಕಿಸದೆ ಅವರ ಖಾಸಗಿ ಜೀವನವನ್ನು ಪ್ರವೇಶಿಸಿದ್ದಾರೆ. ಈಗಾಗಲೇ ಇದು ಡಿಜಿಟಲ್ ಸರ್ವಾಧಿಕಾರದ ರೂಪದಲ್ಲಿ ಜಾರಿಯಲ್ಲಿದೆ.

ಹಣ ಮತ್ತು ಹಣಬಳಕೆಯ ಸಾಧನಗಳನ್ನು ವಿವೇಚನೆಯಿಂದ ಬಳಸುವುದು ಅಗತ್ಯ. ಡಿಜಿಟಲ್  ಅರ್ಥಿಕತೆಯತ್ತ ದಾಪುಗಾಲು ಹಾಕುತ್ತಿರುವ ಭಾರತ ಅಮಾನ್ಯೀಕರಣವನ್ನು ಒಂದು ಮಾರ್ಗವನ್ನಾಗಿ ಮಾತ್ರವೇ ಬಳಸಿಕೊಂಡಿದೆ. ಜನಸಾಮಾನ್ಯರ ಬಳಿ ಇರುವ ನೂರು ರೂ ನೋಟನ್ನು ಎಷ್ಟು ಬಾರಿ ವಿನಿಮಯ ಮಾಡಿದರೂ ಅದರ ಮೌಲ್ಯ ನೂರು ರೂ ಆಗಿರುತ್ತದೆ. ಆದರೆ ಡಿಜಿಟಲ್ ಪ್ರಪಂಚದಲ್ಲಿ ವಿನಿಮಯ ಪ್ರಕ್ರಿಯೆಯನ್ನು ನಿಯಂತ್ರಿಸುವವರು ಪ್ರತಿ ಹೆಜ್ಜೆಯಲ್ಲೂ ಲಾಭ ಗಳಿಸುತ್ತಾರೆ. ಹಾಗಾಗಿಯೇ ಡಿಜಿಟಲ್ ಪ್ರಪಂಚ ವಿಶ್ವದ ಶೇ 1ರಷ್ಟು ಜನರ ಕೋಟ್ಯಧಿಪತಿಗಳ ಕೂಟವನ್ನು ಸೃಷ್ಟಿಸಿದೆ.