ಊಟದ ಮೇಲೆ ಗಮನವಿರಲಿ

ಬದುಕು ಬಂಗಾರ-143

ಊಟ ಮಾಡುವುದೂ ಒಂದು ಕಲೆ. ಆದರೆ ಇಂದು ನಾವು ಅನ್ನದ ಬಟ್ಟಲಿನ ಮೇಲೆಯೇ ಗಮನ ನೆಟ್ಟು ಊಟ ಮಾಡುವುದನ್ನು ಮರೆತೇ ಬಿಟ್ಟಿದ್ದೇವೇನೋ ಎಂಬಂತಹ ವಾತಾವರಣ ಬೆಳೆದುಬಿಟ್ಟಿದೆ. ಈಗ ಹೆಚ್ಚಿನವರು, ಮುಖ್ಯವಾಗಿ ಯುವಕ, ಯುವತಿಯರು, ಕೈಯ್ಯಲ್ಲಿ ಮೊಬೈಲ್ ಹಿಡಿದುಕೊಂಡು, ಟೆಕ್ಸ್ಟ್ ಅಥವಾ ವಾಟ್ಸಪ್ ಲೋಕದಲ್ಲಿಯೇ ಅದೆಷ್ಟು ಮುಳುಗಿರುತ್ತಾರೆಂದರೆ ಅವರೇನು ತಿನ್ನುತ್ತಿದ್ದಾರೆ ಎಂಬ ಪರಿವೆಯೂ ಅವರಿಗಿರದು. ಊಟದ ಬಟ್ಟಲು ಖಾಲಿಯಾದ ನಂತರವೇ ಅವರು ಮತ್ತೆ ಈ ಲೋಕಕ್ಕೆ ಮರಳುತ್ತಾರೆ.

ಅದೇಕೆ ಹೀಗೆ ? ಯುವಜನರು ಮೊಬೈಲ್ ಹಿಡಿದುಕೊಂಡೇ ಊಟ ಮಾಡಿದರೆ ಹಿರಿಯರು ಟೀವಿ ನೋಡಿಕೊಂಡು ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದ್ದಾರೆ. ಶಿಸ್ತಿನಿಂದ ಕುಟುಂಬದ ಎಲ್ಲಾ ಸದಸ್ಯರು ಜತೆಯಾಗಿ ಬೇರೆ ಯಾವ ಪರಿವೆಯಿಲ್ಲದೆ ಊಟ ಮಾಡುವ ಕಾಲ ಮುಗಿದೇ ಹೋಯಿತೆನ್ನುವ ರೀತಿ ಈಗಿದೆ.

ಊಟ ಮಾಡುವಾಗ ಅಥವಾ ಉಪಾಹಾರ ಸ್ವೀಕರಿಸುವಾಗ ನಮ್ಮ ಗಮನ ನಮ್ಮ ಆಹಾರದತ್ತವೇ ಸಂಪೂರ್ಣ ಕೇಂದ್ರೀಕೃತವಾಗಿದ್ದರೆ ಅದರಿಂದ ನಮಗಾಗುವ ಪ್ರಯೋಜನ ಅಷ್ಟಿಷ್ಟಲ್ಲ. ಊಟದ ರುಚಿ ಆಗ ಮಾತ್ರ ನಮ್ಮ ನಾಲಗೆಗೆ ತಟ್ಟುತ್ತದೆ. ಊಟ ಮಾಡುವಾಗ ನಾವು ಬೇರೆಡೆಗೆ ಚಿತ್ತ ಹರಿಸದೇ ಇದ್ದರೆ ನಾವು ಅತಿಯಾಗಿ ಆಹಾರ ಸೇವಿಸುವುದನ್ನೂ ನಿಯಂತ್ರಿಸಬಹುದು.

ಹೀಗೆ ಊಟದ ಮೇಲೆಯೇ ಸಂಪೂರ್ಣ ಗಮನ ಹರಿಸುವ ಪ್ರಕ್ರಿಯೆಗೆ ಮೈಂಡ್ ಫುಲ್ ಈಟಿಂಗ್ ಎಂದು ಕರೆಯಲಾಗುತ್ತದೆ. ಧ್ಯಾನದ ಸಮಯ ಹೇಗೆ ನಾವು ನಮ್ಮ ಉಸಿರಾಟದ ಮೇಲೆ ಗಮನ ಇಟ್ಟಿರುತ್ತೇವೆಯೋ ಅಂತೆಯೇ ಊಟದ ಆರಂಭದಿಂದ ಅಂತ್ಯದವರೆಗೆ ಗಮನ ಬೇರೆಡೆಗೆ ಹರಿಯದಂತೆ ಮಾಡುವುದು ನಮ್ಮ ಕೈಯ್ಯಲ್ಲಿದೆ.

ಇದು ಹೇಗೆ ಸಾಧ್ಯ ?

  • ಮೊತ್ತ ಮೊದಲನೆಯದಾಗಿ ನಿಮ್ಮ ಮೊಬೈಲ್ ಫೋನನ್ನು ಸೈಲೆಂಟ್ ಮೋಡ್ ಮಾಡಿ ಬಿಡಿ. ನೊಟಿಫಿಕೇಶನ್ಸ್ ಕೂಡ ಆಫ್ ಮಾಡಿ ಬಿಡಿ. ನಂತರ ಊಟಕ್ಕೆ ಕುಳಿತುಕೊಳ್ಳುವ ಪರಿಪಾಠ ಬೆಳೆಸಿ.
  • ಊಟದ ಬಟ್ಟಲಿನ ಮೇಲೊಮ್ಮೆ ಗಮನ ಹರಿಸಿ. ಊಟ ನಿಮಗೆ ಸಾಕೇ ಅಥವಾ ಅತಿಯಾಯಿತೇ ಎಂದು ತಿಳಿದುಕೊಂಡು ನಂತರ ಊಟ ಆರಂಭಿಸಿ.
  • ಮೇಜಿನ ಮೇಲಿನ ಊಟದ ಬಟ್ಟಲನ್ನು ಕೈಯ್ಯಲ್ಲೆತ್ತಿಕೊಂಡು ಆಹಾರದ ಪರಿಮಳ ಆಸ್ವಾದಿಸಿ. ಅದನ್ನು ಸಂಪೂರ್ಣ ಸವಿಯಬೇಕೆಂಬ ಮನಸ್ಸು ನಿಮ್ಮದಾಗಬೇಕು. ಊಟ ಆರಂಭಕ್ಕೂ ಮುನ್ನ ಸ್ವಲ್ಪ ಕೈಯ್ಯಲ್ಲಿ ಹಾಕಿಕೊಂಡು ರುಚಿ ನೋಡಿ ಬಿಡಿ, ನಂತರ ಸಾವಕಾಶವಾಗಿ ಚೆನ್ನಾಗಿ ಜಗಿದು ಊಟ ಮಾಡಿ. ಊಟ ಮುಗಿದ ಕೂಡಲೇ ಒಂದು ನಿಮಿಷ ಹಾಗೆಯೇ ಸುಮ್ಮನೆ ಕುಳಿತು ಊಟ ಹೇಗಿತ್ತೆಂದು ನಿಮಗೆ ನೀವೇ ಕೇಳಿಕೊಳ್ಳಿ.