ಕೆಸರುಗದ್ದೆಯಾದ ಬಿ ಸಿ ರೋಡ್ ಚರಂಡಿ ಕಾಮಗಾರಿ ಅವಾಂತರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಮುಖ್ಯ ಪೇಟೆ ಇದೀಗ ಮತ್ತೆ ಕೆಸರುಮಯಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ. ಬಿ ಸಿ ರೋಡು ಪೇಟೆಯ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಇನ್ನೂ ಪ್ರಾರಂಭಗೊಳ್ಳದೆ ಇದ್ದು, ಇಲ್ಲಿನ ಚರಂಡಿ ಅವ್ಯವಸ್ಥೆ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚರಂಡಿ ವ್ಯವಸ್ಥೆ ಕಲ್ಪಿಸಲು ಮಳೆಗಾಲ ಆರಂಭವಾಗುವ ಹೊತ್ತಿಗೆ ಕಾಮಗಾರಿ ಆರಂಭಿಸಿತ್ತು. ಅಷ್ಟರಲ್ಲಿ ಮುಂಗಾರು ಆರಂಭವಾದುದರಿಂದ ಇಲ್ಲಿನ ಪೇಟೆ ಅವ್ಯವಸ್ಥೆಯ ಆಗರವಾಗಿ ಮಾರ್ಪಾಡು ಹೊಂದಿದೆ.

ಇದೀಗ ಚರಂಡಿ ಕಾಮಗಾರಿ ಮುಕ್ತಾಯ ಹಂತದಲ್ಲಿರುತ್ತಲೇ ಚರಂಡಿಯ ಎರಡು ಬದಿಗಳಿಗೆ ಹೊಂಡ ಮುಚ್ಚಲು ಹೆದ್ದಾರಿ ಬದಿಯಲ್ಲಿ ಮಣ್ಣು ತಂದು ರಾಶಿ ಹಾಕಿದ್ದು, ಈ ಮಣ್ಣು ಮಳೆ ನೀರಿನಿಂದ ಮಿಶ್ರಿತಗೊಂಡು ಕೆಸರಿನ ರಾಡಿಯಾಗಿ ಪರಿಣಮಿಸಿದೆ. ಇದು ಇಲ್ಲಿನ ಸಾರ್ವಜನಿಕರ ಹಾಗೂ ವಾಹನ ಸವಾರರ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಇಡೀ ಬಿ ಸಿ ರೋಡು ಪೇಟೆ ಕೆಸರುಗದ್ದೆಯಾಗಿ ಜನ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಹೆದ್ದಾರಿ, ಸರ್ವಿಸ್ ರಸ್ತೆಗಳು ಹೊಂಡ-ಗುಂಡಿ ಹಾಗೂ ಕೆಸರಿನಿಂದ ಕೂಡಿದ್ದು, ಜನ ಸಂಕಷ್ಟ ಅನುಭವಿಸುತ್ತಿರುವ ಮಧ್ಯೆಯೇ ಇದೀಗ ಮುಖ್ಯ ಹೆದ್ದಾರಿ ಕೂಡಾ ಕೆಸರಿನ ಕೊಂಪೆಯಾಗಿ ಮಾರ್ಪಾಟುಗೊಂಡಿರುವುದು ಸಾರ್ವಜನಿಕರು ವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ. ತಕ್ಷಣ ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಇಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.