ಬಿ ಸಿ ರೋಡಿನ ಸುದೃಢ ವಾಣಿಜ್ಯ ಸಂಕೀರ್ಣಕ್ಕೆ ಕುತ್ತು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಹತ್ತು-ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಬಂಟ್ವಾಳಕ್ಕೆ ಭಾನುವಾರ ಮುಖ್ಯಮಂತ್ರಿ ಆಗಮಿಸಿ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿರುವ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಇಲ್ಲಿನ ತಾ ಪಂ ಅಡ್ಡಿಯಾದ ಘಟನೆ ಬೆಳಕಿಗೆ ಬಂದಿದೆ.

ಹಲವು ಕಾಮಗಾರಿಗಳ ಉದ್ಘಾಟನೆ ಜೊತೆಗೆ ಬಿ ಸಿ ರೋಡಿನ ಹೃದಯ ಭಾಗದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಕನಸು ಕಂಡಿದ್ದ ಸಚಿವರು ಇಲ್ಲಿನ ಹಳೆ ತಾ ಪಂ ಕಚೇರಿ ಕಟ್ಟಡ ಸಹಿತ ಕಂದಾಯ ಇಲಾಖೆಯ ಜಮೀನಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಮುಂದಾಗಿದ್ದಲ್ಲದೆ ಮುಖ್ಯಮಂತ್ರಿ ಕೈಯಿಂದಲೇ ಭಾನುವಾರ ಶಿಲಾನ್ಯಾಸ ನೆರವೇರಿಸಲು ಸಿದ್ಧತೆಯನ್ನೂ ನಡೆಸಿದ್ದರು.

ಆದರೆ ಈ ಮಧ್ಯೆ ತಾ ಪಂ ಅಧಿಕಾರಿ ಬಿ ಸಿ ರೋಡಿನ ತಾ ಪಂ ಸುದೃಢ ವಾಣಿಜ್ಯ ಸಂಕೀರ್ಣವನ್ನು ಕೂಡಾ ಕೆಡವಿ ಹಾಕಲು ಕಾರ್ಯಯೋಜನೆಯ ಸಿದ್ಧಪಡಿಸಿದ್ದಲ್ಲದೆ ಇದರಲ್ಲಿದ್ದ ಅಂಗಡಿ ಮಾಲಕರೊಂದಿಗೆ ಸೌಜನ್ಯದಿಂದ ವರ್ತಿಸದೆ ಏಕಾಏಕಿ ದರ್ಪ ಹಾಗೂ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿದ ಪರಿಣಾಮ ತಾಳ್ಮೆ ಕಳೆದುಕೊಂಡು ಹತಾಶರಾದ ಇಲ್ಲಿನ ಅಂಗಡಿ ಮಾಲಕರು ಜಿ ಪಂ ಅಧ್ಯಕ್ಷರ ನ್ಯಾಯಾಲಯದ ಕಟಕಟೆ ಏರಿ ಕಟ್ಟಡ ಕೆಡವುದಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವರು ಕಂದಾಯ ಇಲಾಖೆಯ ಜಮೀನಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಿ ಅದಕ್ಕೆ ನೀಲ ನಕ್ಷೆ ತಯಾರಿಸಲೂ ಸಂಬಂಧಪಟ್ಟವರಿಗೆ ಸೂಚಿಸಿದ್ದರು. ಅನಿವಾರ್ಯ ಕಾರಣಕ್ಕೆ ತಾ ಪಂ ಕಟ್ಟಡ ಬೇಕಾದಲ್ಲಿ ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಇದಲ್ಲಿನ ಅಂಗಡಿ ಮಾಲಕರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಈ ಬಗ್ಗೆ ಅಂತಿಮ ಹಂತದಲ್ಲಿ ಅನಿವಾರ್ಯ ಎಂದು ಕಂಡುಬಂದಲ್ಲಿ ಅಂಗಡಿಗಳನ್ನು ಅಭಿವೃದ್ಧಿ ಕಾರಣಕ್ಕಾಗಿ ಬಿಟ್ಟು ಕೊಡಲು ಸಿದ್ಧ ಎಂದು ಸಚಿವರಿಗೆ ಭರವಸೆಯನ್ನೂ ನೀಡಿದ್ದರು ಎನ್ನಲಾಗಿದೆ.

ಆದರೆ ತಾ ಪಂ ಅಧಿಕಾರಿ ಏಕಾಏಕಿ ಆರಂಭದಲ್ಲೇ ಸುದೃಢ ಕಟ್ಟಡ ಕೆಡಹುವ ಹುನ್ನಾರ ತೆರೆಮರೆಯಲ್ಲಿ ನಡೆಸಿದ್ದಲ್ಲದೆ ಸಾರ್ವಜನಿಕರೊಂದಿಗೆ ಉಡಾಫೆ ವರ್ತಿಸಿದ ಕಾರಣಕ್ಕೆ ಇದೀಗ ಮತ್ತೊಂದು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಕನಸಿಗೆ ವಿಘ್ನ ಉಂಟಾಗಿದೆ ಎನ್ನಲಾಗಿದ್ದು, ಇದೀಗ ತಾಲೂಕು ಪಂಚಾಯತ್ ಅಧಿಕಾರಿಯ ಬಗ್ಗೆ ವ್ಯಾಪಕ ಆಕ್ರೋಶ ತಾಲೂಕಿನಾದ್ಯಂತ ಕೇಳಿ ಬರುತ್ತಿದೆ.