ಮಹಿಳಾ ಕಾರ್ಯಕರ್ತರನ್ನು ಸೆಳೆಯಲು ಸೀರೆ, ಕುಂಕುಮ, ಅಕ್ಕಿ ವಿತರಿಸಿದ ಬಾವ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮುಂದಿನ ಚುನಾವಣೆಗೆ ಈಗಾಗಲೇ ತಿಪ್ಪರಲಾಗ ಹಾಕಲು ಶುರು ಮಾಡಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಬಿ ಎ ಮೊಯ್ದೀನ್ ಬಾವ ತನ್ನ ಕ್ಷೇತ್ರದಲ್ಲಿ ಮಹಿಳಾ ಕಾರ್ಯಕರ್ತರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಸಮಾವೇಶವೊಂದನ್ನು ಆಯೋಜಿಸಿ ಅವರಿಗೆ ಸೀರೆ, ಕುಂಕುಮ ಮತ್ತು ಅಕ್ಕಿಯನ್ನು ವಿತರಣೆ ಮಾಡಿದ್ದಾರೆ.

ಪ್ರಚಾರವನ್ನು ಪಡೆದುಕೊಳ್ಳುವಲ್ಲಿ ನಿಸ್ಸೀಮನೆಂದೇ ಗುರುತಿಸಿಕೊಂಡಿರುವ ಬಾವ ಈ ಹಿಂದೆ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿ ಅದರಲ್ಲಿ ತನ್ನ ಭಾವಚಿತ್ರವನ್ನು ಪ್ರಕಟಿಸಿ ಪ್ರಚಾರ ಪಡೆದುಕೊಂಡಿದ್ದು ದೊಡ್ಡ ವಿವಾದವಾಗಿತ್ತು. ಇದೀಗ ಭಾನುವಾರದಂದು ಕೂಳೂರಿನಲ್ಲಿ ನಡೆಸಿದ ಸಮಾವೇಶದಲ್ಲಿ ಸುಮಾರು 500 ಮಂದಿ ಮಹಿಳಾ ಕಾರ್ಯಕರ್ತರಿಗೆ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಸೀರೆಯನ್ನು ವಿತರಣೆ ಮಾಡಿ ಮುಂದಿನ ಚುನಾವಣೆಯಲ್ಲಿ ಅವರು ಮಾಡಲಿರುವ ಭ್ರಷ್ಟಾಚಾರದ ಒಂದು ಝಲಕ್ ಒದಗಿಸಿದರು.

ಹೆಬ್ಬಾಳ್ಕರ್ ಭಾಷಣ ಮುಗಿಯುತ್ತಿದ್ದಂತೆ ಮಹಿಳಾ ಕಾರ್ಯಕರ್ತೆಯರಿಗೆ ಸೀರೆ, ಕುಂಕುಮ ಮತ್ತು ಅಕ್ಕಿಯ ವಿತರಣೆ ಶುರು ಮಾಡಲಾಯಿತು. ಆದರೆ ಕಾಣಿಕೆ ಸ್ವೀಕರಿಸಿಕೊಂಡವರು

ಜಾಗ ಖಾಲಿ ಮಾಡುತ್ತಿರುವುದನ್ನು ಕಂಡು ಕಂಗಾಲಾದ ಶಾಸಕ ಬಾವ ಕೂಡಲೇ  ಸ್ವಯಂಸೇವಕರಿಗೆ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಕಾರ್ಯಕ್ರಮದ ಕೊನೆಯಲ್ಲಿ ಅದನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ಕೊನೆಯಲ್ಲಿ ಎಲ್ಲಾ ಕಾರ್ಯಕರ್ತರನ್ನು ಸಾಲಾಗಿ ಕುಳಿತುಕೊಳ್ಳಿಸಿ ಸೀರೆ ವಿತರಣೆ ಮಾಡಲಾಗಿದೆ. ನಗರದ ಪ್ರಮುಖ ಅಂಗಡಿಯೊಂದರಿಂದ ಉತ್ತಮ ಸೀರೆಗಳನ್ನೇ ಖರೀದಿಸಲಾಗಿತ್ತು. ಟಿಂಬರ್ ಮರ್ಚಂಟ್ ಆಗಿರುವ ಬಾವಾ ರಾಜ್ಯದ ಅತ್ಯಂತ ಸಿರಿವಂತ ಶಾಸಕರಲ್ಲಿ ಪ್ರಮುಖರು.