ಬ್ಯಾರಿಕೇಡ್, ಟ್ರಾಫಿಕ್ ಕೋನು ಅಳವಡಿಸಿಯೂ ಬಗೆಹರಿಯದ ಪಿವಿಎಸ್ ಸಂಚಾರ ದಟ್ಟಣೆ ಸಮಸ್ಯೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅತ್ಯಂತ ಹೆಚ್ಚು ವಾಹನ ದಟ್ಟಣೆಯಿರುವ ನಗರದ ಕುದ್ಮುಲ್ ರಂಗರಾವ್ ರಸ್ತೆಯಲ್ಲಿ ಪದೇಪದೇ ತಲೆದೋರುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಬ್ಯಾರಿಕೇಡ್ ಹಾಗೂ ಟ್ರಾಫಿಕ್ ಕೋನುಗಳನ್ನು ರಸ್ತೆ ಮಧ್ಯದಲ್ಲಿ ಅಳವಡಿಸಿದರೂ ಇವುಗಳಿಂದ ಇಲ್ಲಿನ ಸಮಸ್ಯೆ ಪರಿಹಾರವಾಗಿಲ್ಲ.

ಪಿವಿಎಸ್ ವೃತ್ತವಿರುವ ಟ್ರಾಫಿಕ್ ಸಿಗ್ನಲ್ ಹಲವು ವಿಧದಲ್ಲಿ ನವಭಾರತ ವೃತ್ತದಿಂದ ಹಿಡಿದು ಪಿವಿಎಸ್ ತನಕ ಸಂಚಾರ ಸಮಸ್ಯೆಗೆ ಕಾರಣವಾಗಿದೆ. ಇದು ಸಾಲದೆಂಬಂತೆ ಕುದ್ಮುಲ್ ರಂಗರಾವ್ ಹಾಸ್ಟೆಲ್ ಸಮೀಪ ಇರಿಸಲಾಗಿರುವ ಬ್ಯಾರಿಕೇಡುಗಳು ಸಮಸ್ಯೆಯನ್ನು ಮತ್ತಷ್ಟು  ಜಟಿಲಗೊಳಿಸಿವೆ. ಇದೇ ಪ್ರದೇಶದಲ್ಲಿ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಲು, ಇಳಿಸಲು ನಿಲ್ಲುತ್ತಿರುವುದರಿಂದ ಸುಸೂತ್ರ ವಾಹನ ಸಂಚಾರಕ್ಕೆ ತೊಡಕಾಗಿದೆ. ಕರಂಗಲ್ಪಾಡಿ ಬಸ್ ಸ್ಟಾಪ್ ಸಮೀಪವೂ ಇದೇ ಸಮಸ್ಯೆಯಿದೆ.

ಪಿವಿಎಸ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಸಂಚರಿಸುವ ಬಸ್ಸುಗಳಿಗೆ ಪರ್ಯಾಯ ಮಾರ್ಗ ಸೂಚಿಸುವ ಮೂಲಕ ಈ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದೆಂಬುದು ಕೆಲವರ ಅಭಿಪ್ರಾಯ. ಈ ಬಗ್ಗೆ ಸ್ಥಳೀಯ ಕೋರ್ಟ್ ವಾರ್ಡಿನ ಕಾರ್ಪೊರೇಟರ್ ವಿನಯರಾಜ್ ಅವರ ಗಮನ ಸೆಳೆದಾಗ ಈ ರಸ್ತೆಯನ್ನು ಸದ್ಯದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂಬ ಮಾಹಿತಿ ನೀಡುತ್ತಾರೆ. ರಸ್ತೆಯನ್ನು ಅಗಲಗೊಳಿಸಿದಾಗ ಸಮಸ್ಯೆಗೆ ಪರಿಹಾರ ದೊರೆಯಲಿದೆಯೆಂಬ ಮಾತೂ ಅವರಿಂದ ಬಂತು.

ಎಸಿಪಿ (ಟ್ರಾಫಿಕ್) ತಿಲಕಚಂದ್ರ ಅವರ ಪ್ರಕಾರ ರಸ್ತೆಯಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡುಗಳು ಹಾಗೂ ಟ್ರಾಫಿಕ್ ಕೋನುಗಳು ಅಪಘಾತಗಳನ್ನು ತಡೆಯಲು ಸಹಕಾರಿ. ಚಾಲಕರು ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದಲೇ ಕೆಲವೊಮ್ಮೆ ಇಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಅವರು ಹೇಳುತ್ತಾರೆ.