ಹೆದ್ದಾರಿ ಪ್ರಯಾಣಿಕರಿಗೆ ಕಂಟಕವಾಗಿದೆ ಬ್ಯಾರಿಕೇಡುಗಳು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಅಪಘಾತ ನಿಯಂತ್ರಿಸಲು ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಇರಿಸಲಾದ (ಜಾಹೀರಾತು ಫಲಕ) ಬ್ಯಾರಿಕೇಡುಗಳು, ಇದೀಗ ಅಪಘಾತ ನಿಯಂತ್ರಿಸುವ ಬದಲಾಗಿ ಅಪಘಾತ ವೃದ್ಧಿಸುತ್ತಿದ್ದು, ಈ ಬಗ್ಗೆ ಎಚ್ಚರಗೊಳ್ಳಬೇಕಾದ ಪೊಲೀಸ್ ಇಲಾಖೆ ಮೌನ ವಹಿಸುವ ಮೂಲಕ ಹೆದ್ದಾರಿ ಸಂಚಾರಿಗಳ ಪ್ರಾಣ ಕಷ್ಟದಲ್ಲಿದೆ.

ಸಣ್ಣ ಮಳೆಗಾಳಿಗೋ, ಇಲ್ಲ ಯಾವುದೋ ಘನ ವಾಹನಗಳ ದಾಳಿಗೋ ತುತ್ತಾಗಿ ಹೆದ್ದಾರಿಯಲ್ಲಿ ಮಲಗುತ್ತಿರುವ ಬ್ಯಾರಿಕೇಡುಗಳತ್ತ ಯಾರೂ ಗಮನ ಹರಿಸದಿರುವುದರಿಂದ ಅದು ಗಂಟೆಗಟ್ಟಲೇ ಅದೇ ಸ್ಥಿತಿಯಲ್ಲಿ ಮಲಗುವಂತಾಗುತ್ತಿದೆ. ವೇಗ ನಿಯಂತ್ರಣಕ್ಕೆ ಕೆಲವು ಕಡೆ ಅನಿವಾರ್ಯ ಸ್ಥಿತಿಯಲ್ಲಿ ಹೆದ್ದಾರಿಗಡ್ಡವಾಗಿ ಈ ಬ್ಯಾರಿಕೇಡುಗಳನ್ನು ಅಳವಡಿಸಿದರೆ, ಕೆಲವೆಡೆ ಶ್ರೀಮಂತರ ಒತ್ತಡಕ್ಕೆ ಮಣಿದು ಈ ಬ್ಯಾರಿಕೇಡುಗಳು ಹೆದ್ದಾರಿ ಮಧ್ಯದಲ್ಲಿ ಕರ್ತವ್ಯಪಾಲನೆ ಮಾಡುವಂತಾಗಿದೆ.

ಪೊಲೀಸರ ಮಧ್ಯಸ್ಥಿಕೆಯಲ್ಲಿ ಈ ಬ್ಯಾರಿಕೇಡುಗಳು ಎಲ್ಲಿ ಅಳವಡಿಕೆಯಾಗಬೇಕೆಂಬುದು ನಿರ್ಧಾರವಾಗುವುದರಿಂದ ಅದು ಅಪಾಯಕಾರಿ ಸ್ಥಿತಿಯಲ್ಲಿ ಸೊಂಟ ಮುರಿದು ಮಲಗಿದ್ದರೂ ಅದನ್ನು ಪೊಲೀಸರೇ ಎತ್ತಿ ನಿಲ್ಲಿಸಬೇಕೆಂಬ ನಿಧಾರಕ್ಕೆ ಬಂದ ಸಾರ್ವಜನಿಕರು ಅದನ್ನು ನೋಡಿಯೂ ನೋಡದಂತೆ ಹೋಗುವುದು ಇಲ್ಲಿ ನಿತ್ಯ ಕಂಡು ಬರುವ ದೃಶ್ಯ. ಈ ಅಡ್ಡಬಿದ್ದ ವೇಗ ನಿಯಂತ್ರಕ ಗಮನಕ್ಕೆ ಬಾರದೆ ಅದರ ಮೇಲಿಂದ ಚಲಿಸುವ ವಾಹನಗಳು ನಿಯಂತ್ರಣ ಕಳೆದುಕೊಂಡು ಒಂದೋ ಮತ್ತೊಂದು ವಾಹನಕ್ಕೆ, ಇಲ್ಲ ಪಕ್ಕದ ತಗ್ಗಿಗೆ ಚಲಿಸಿ ಅಪಘಾತ ಸಂಭವಿಸುತ್ತಿದೆ.

ಇಂಥ ಅಪಘಾತ ನಿಯಂತ್ರಕಗಳೇ ಅಪಘಾತಕ್ಕೆ ಕಾರಣವಾಗುತ್ತಿರುವುದು ಕಾನೂನು ಪಾಲಕರೇ ಕಾನೂನು ಕೈಗೆತ್ತಿಕೊಂಡಂತಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸುವಂತೆ ಹೆದ್ದಾರಿ ಸಂಚಾರಿಗಳು ಆಗ್ರಹಿಸಿದ್ದಾರೆ.